Advertisement

Haliyal: ಶಿಕ್ಷಣ-ಆರೋಗ್ಯಕ್ಕೆ ಮೊದಲಾದ್ಯತೆ ನೀಡಿ-ಆರ್‌.ವಿ. ದೇಶಪಾಂಡೆ

06:23 PM Aug 31, 2023 | Team Udayavani |

ಹಳಿಯಾಳ: ಪ್ರತಿಯೊಬ್ಬರೂ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಬೇಕು. ಇಂದಿನ ವಿದ್ಯಾರ್ಥಿಗಳು ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕೆಂದರೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

Advertisement

ಪಟ್ಟಣದಲ್ಲಿರುವ ಶಿವಾಜಿ ಪದವಿ ಪೂರ್ವ ಕಾಲೇಜಿ 2ನೇ ಮಹಡಿಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 29 ಲಕ್ಷ ರೂ.
ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಎರಡು ಕೊಠಡಿಗಳ ಶಂಕುಸ್ಥಾಪನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು. ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿಯೂ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಹಿಂದೆ ಓಡುವ ವಿದ್ಯಾರ್ಥಿಗಳಿಗೆ ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಅಗತ್ಯತೆಯಿದೆ. ಶಿಕ್ಷಣಕ್ಕೆ ಪೂರಕವಾಗಿ ಕ್ರೀಡಾಚಟುವಟಿಕೆಯಲ್ಲಿಯೂ ತೊಡಗಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಮಕ್ಕಳನ್ನು ಓದಿಸಲು ಪಾಲಕರು ಸಾಕಷ್ಟು ಕಷ್ಟ ಪಡುತ್ತಾರೆ. ಅವರ ಆಸೆ ಹಾಗೂ ನಿಮ್ಮ ಗುರಿ ಸಾಧಿಸಲು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಅದೇ ರೀತಿ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಬೇಕೆಂದರೆ ಕಠಿಣ ಪರಿಶ್ರಮ ಪಡಬೇಕು ಎಂದು ಹೇಳಿದರು.

ಮೂಲ ಸೌಕರ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ ವಿಶೇಷ ಕೌಶಲ್ಯಗಳನ್ನು ಸಹ ಕಲಿಯಬೇಕು. ಗ್ರಂಥಾಲಯ, ಪ್ರಯೋಗಾಲಯಗಳು ಹಾಗೂ ಕ್ರೀಡಾಂಗಣದ ಲಾಭವನ್ನು ಪಡೆದುಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Advertisement

ಕಾಲೇಜಿನ ಎರಡನೇ ಮಹಡಿಯಲ್ಲಿ ನಿರ್ಮಾಣಗೊ ಳ್ಳುತ್ತಿರುವ ಕೊಠಡಿಗಳನ್ನು ಗುಣಮಟ್ಟದೊಂದಿಗೆ ನಿರ್ಮಿಸಿ ಹಾಗೂ ವಿದ್ಯಾರ್ಥಿಗಳಿಗೆ ನಿರ್ಮಾಣ ಕಾರ್ಯದಿಂದ ತೊಂದರೆಯಾಗದಂತೆ ಕ್ರಮವಹಿಸಿ ಎಂದು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಸತ್ಯಜಿತ ಗಿರಿ, ಸದಸ್ಯ ಓರ್ವಿಲ್‌ ಫರ್ನಾಂಡಿಸ್‌, ಪುರಸಭೆ ನಿಕಟಪೂರ್ವ ಅಧ್ಯಕ್ಷ ಅಜರುದ್ದೀನ್‌ ಬಸರೀಕಟ್ಟಿ, ಉಪಾಧ್ಯಕ್ಷೆ ಸುವರ್ಣ ಮಾದರ, ಸದಸ್ಯ ಪಯಾಜ್‌ ಶೇಖ್‌, ಬಿಇಒ ಪ್ರಮೋದ ಮಹಾಲೆ, ಕಾಲೇಜು ಪ್ರಾಚಾರ್ಯರಾದ ಕೆ.ಟಿ. ರಮೇಶ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next