ಬೆಂಗಳೂರು: ಚಿತ್ರದುರ್ಗದ ಡಾ| ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಜಾತಿ ನಿಂದನೆ ಹಾಗೂ ಧಾರ್ಮಿಕ ಕೇಂದ್ರಗಳ ದುರ್ಬಳಕೆಗೆ ಸಂಬಂಧಿಸಿದಂತೆ ಆರೋಪಗಳನ್ನು ನಿಗದಿಪಡಿಸಿ ವಿಚಾರಣ ನ್ಯಾಯಾಲಯ ಹೊರಡಿಸಿದ್ದ ಆದೇಶಗಳನ್ನು ವಜಾ ಮಾಡಿರುವ ಹೈಕೋರ್ಟ್, ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳನ್ನು ಸೂಕ್ತ ರೀತಿಯಲ್ಲಿ ಮರು ನಿಗದಿಪಡಿಸುವಂತೆ ವಿಚಾರಣ ನ್ಯಾಯಾಲಯಕ್ಕೆ ಆದೇಶಿಸಿದೆ.
ಈ ಆದೇಶದಿಂದ ಜಾತಿ ನಿಂದನೆ ಮತ್ತು ಧಾರ್ಮಿಕ ಕೇಂದ್ರಗಳ ದುರ್ಬಳಕೆ ಆರೋಪಗಳಿಂದ ಮುರುಘಾ ಶರಣರಿಗೆ ಹೈಕೋರ್ಟ್ ನಿಂದ ರಕ್ಷಣೆ ಸಿಕ್ಕಿದೆ. ಆದರೆ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಗಳಡಿ ನಿಗದಿಪಡಿಸಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣ ನ್ಯಾಯಾಲಯದಲ್ಲಿ ಅವರು ವಿಚಾರಣೆ ಎದುರಿಸಬೇಕಾಗುತ್ತದೆ.
ಚಿತ್ರದುರ್ಗ ವಿಶೇಷ ನ್ಯಾಯಾಲಯ ತಮ್ಮ ವಿರುದ್ಧ ಆರೋಪ ನಿಗದಿಪಡಿಸಿ ಹೊರಡಿಸಿರುವ ಆದೇಶಗಳನ್ನು ವಜಾ ಮಾಡುವಂತೆ ಕೋರಿ ಡಾ| ಶರಣರು ಸಲ್ಲಿಸಿದ್ದ ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. 2023ರ ನ. 23ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಲಯವು ಸೋಮವಾರ ಪ್ರಕಟಿಸಿದ್ದು ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಾಸಿಕ್ಯೂಷನ್ ಹೇಳಿದ್ದನ್ನು ಆಧರಿಸಿ ಆರೋಪ ನಿಗದಿ ಮಾಡುವಾಗ ವಿಶೇಷ ನ್ಯಾಯಾಲಯವು ಕೇವಲ ಅಂಚೆ ಕಚೇರಿಯಂತೆ ವರ್ತಿಸಬಾರದಿತ್ತು. ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988ರ ಕೆಲವು ಸೆಕ್ಷನ್ಸ್ ಮುರುಘಾ ಮಠಕ್ಕೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್‌ನ ಮತ್ತೊಂದು ನ್ಯಾಯಪೀಠ ಹೇಳಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ-1989ರ ಸೆಕ್ಷನ್ ಇಲ್ಲಿ ಅನ್ವಯಿಸುವುದಿಲ್ಲ. ಆರೋಪಿ ಮುರುಘಾ ಶರಣರ ವಿರುದ್ಧ ಮರು ಆರೋಪ ನಿಗದಿ ಮಾಡಬೇಕು. ಈ ನೆಲೆಯಲ್ಲಿ ಅರ್ಜಿಗಳನ್ನು ಭಾಗಶಃ ಪುರಸ್ಕರಿಸಲಾಗಿದ್ದು 2023ರ ಏಪ್ರಿಲ್ 13 ಮತ್ತಯ 20ರಂದು ವಿಶೇಷ ನ್ಯಾಯಾಲಯ ಮಾಡಿರುವ ಆರೋಪ ನಿಗದಿ ಆದೇಶಗಳನ್ನು ವಜಾ ಮಾಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.