ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಐನಹಳ್ಳಿ ಗೇಟ್‌ನಿಂದ ಕಾತ್ರಾಳು ವಿದ್ಯಾಪೀಠದ ವರೆಗಿನ ಸುಮಾರು 5 ಕಿಮೀ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಮುಂದಿನ ಮಳೆಗಾಲದಲ್ಲಿ ಗಿಡಗಳನ್ನು ನೆಡುವ ಸಲುವಾಗಿ ಅರಣ್ಯ ಇಲಾಖೆ ವತಿಯಿಂದ ಇಟಾಚಿ ಯಂತ್ರ ಬಳಸಿ ಗುಂಡಿಗಳನ್ನು ತೆಗೆಯುವ ಕಾರ್ಯ ಮಾಡಲಾಗುತ್ತಿದೆ. ಆದರೆ ಇದು ಅಸಮಪರ್ಕವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ ಮೊದಲು ಈ ಮಾರ್ಗದಲ್ಲೇ ಹಾದು ಹೋಗಿತ್ತು. ಬಳಿಕ ಕಾತ್ರಾಳು ಕೆರೆಯನ್ನು ಬಳಕೆ ಮಾಡಿ ನೇರ ರಸ್ತೆಯನ್ನಾಗಿಸಿದ ಬಳಿಕ ಇಲ್ಲಿನ 5 ಕಿಮೀ ಉದ್ದದ ರಸ್ತೆ ಕೆಲವು ವರ್ಷಗಳಿಂದ ಹಾಳು ಬಿದ್ದಿತ್ತು. ಗುಂಡಿಗಳಿಂದ ತುಂಬಿದ್ದ ಈ ರಸ್ತೆಯಲ್ಲಿ ಜನರ ಸಂಚಾರವಿಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಜಾಲಿ ಗಿಡಗಳು ಬೆಳೆದು ರಸ್ತೆಯೇ ಕಾಣದಂತಾಗಿತ್ತು. ಹಲವು ತಿಂಗಳುಗಳ ಹಿಂದೆ 5 ಕಿಮೀ ಉದ್ದದ ರಸ್ತೆಯನ್ನು ಈ ಹಿಂದೆ ಇದ್ದ ಹೆದ್ದಾರಿಯ ಅಗಲಕ್ಕೆ ರಸ್ತೆಯನ್ನು ಡಾಂಬರೀಕರಣಗೊಳಿಸಿ ರಸ್ತೆ ಇಕ್ಕೆಲಗಳಲ್ಲಿ ಬಿಳಿ ಪಟ್ಟಿ, ರಿಪ್ಲೆಕ್ಟರ್‌ಗಳನ್ನು, ಸೂಚನಾ ಫಲಕಗಳನ್ನು ಹಾಗೂ ಒಂದು ಪ್ರಮುಖ ರಸ್ತೆ ಸೇತುವೆಯನ್ನು ಅಭಿವೃದ್ಧಿಪಡಿಸಲಾಯಿತು. ಬಳಿಕ ಹಲವಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿವೆ.
ರಸ್ತೆಯನ್ನೂ ಬಿಡದೆ ಒತ್ತುವರಿ!: ಅದ್ಯಾವಾಗ ಈ ರಸ್ತೆ ಹಾಳು ಬಿದ್ದಿತ್ತೋ, ಇನ್ನೇನು ಸರ್ಕಾರ ಈ ರಸ್ತೆಯನ್ನು ಮರೆತಂತಿದೆ ಎಂದು ತಿಳಿದೋ ಏನೋ ರಸ್ತೆಯ ಇಕ್ಕೆಲಗಳ ಜಮೀನಿನ ಕೃಷಿಕರು ಜಮೀನುಗಳ ಬಳಿ ಡಾಂಬರ್ ರಸ್ತೆಯ ಅಂಚಿನವರೆಗೆ ಜಮೀನು ಉಳುಮೆ ಮಾಡಿಕೊಂಡು ರಸ್ತೆ ಒತ್ತುವರಿ ಮಾಡಿಬಿಟ್ಟಿದ್ದಾರೆ. ಕೆಲವರು ಅಡಿಕೆ, ತೆಂಗಿನಮರಗಳನ್ನೂ ಬೆಳೆಸಿದ್ದಾರೆ. ಇನ್ನು ಕೆಲವರು ರಸ್ತೆ ಅಂಚಿನವರೆಗೆ ಕಲ್ಲುಕಂಬ ನೆಟ್ಟು ತಮ್ಮ ಗಡಿಯನ್ನು ಗುರುತಿಸಿಕೊಂಡಿದ್ದಾರೆ.
ಇಂತಹ ರಸ್ತೆಯ ಇಕ್ಕೆಲಗಳಲ್ಲಿ ಇದೀಗ ಅರಣ್ಯ ಇಲಾಖೆ ವತಿಯಿಂದ ಮುಂದಿನ ಮಳೆಗಾಲಕ್ಕೆ ಗಿಡಗಳನ್ನು ನೆಡಲು ಗುಂಡಿಗಳನ್ನು ಇಟಾಚಿ ಯಂತ್ರದಿಂದ ತೆಗೆಯಲಾಗುತ್ತಿದೆ. ಈ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಿರುವ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆಗಳ ಸಮನ್ವಯದ ಕೊರತೆಯಿಂದ ರಸ್ತೆ ಒತ್ತುವರಿಯನ್ನು ಲೆಕ್ಕಿಸದೆ ಗಿಡಗಳನ್ನು ನೆಡಲು ರಸ್ತೆ ಗುಂಡಿಗಳನ್ನು ತೆಗೆಸಲಾಗುತ್ತಿದೆ. ಕೆಲವೆಡೆ ಒತ್ತುವರಿ ಆದ ಕಡೆ ಗುಂಡಿಯನ್ನೇ ತೆಗೆದಿಲ್ಲ. ಇನ್ನು ಕೆಲ ಭಾಗಗಳಲ್ಲಿ ರಸ್ತೆಯ ಅಂಚಿಗೆ ಗುಂಡಿ ಅಗೆಯಲಾಗಿದ್ದರೆ, ಹಲವೆಡೆ ರಸ್ತೆಯಿಂದ ನಾಲ್ಕಾರು ಅಡಿ ದೂರದಲ್ಲಿ ಗುಂಡಿ ತೆಗೆಯಲಾಗಿದೆ. ಸರ್ಕಾರದ ಇಲಾಖೆಗಳ ಈ ಕೆಲಸಗಳನ್ನು ನೋಡಿದರೆ ಒಂದೊಮ್ಮೆ ಯಾರಾದರೂ ರಸ್ತೆಯ ಅರ್ಧಕ್ಕೆ ಒತ್ತುವರಿ ಮಾಡಿದರೂ ಕೇಳುವವರಿಲ್ಲ, ಇಲ್ಲಿ ಒತ್ತುವರಿ ಮಾಡಿದವರದೇ ಆಟ ಎಂಬಂತಾಗಿದೆ. ರಸ್ತೆಯನ್ನು ಯಾರು ಎಷ್ಟು ಒತ್ತುವರಿ ಮಾಡಿರುತ್ತಾರೋ ಅದನ್ನು ಬಿಟ್ಟು ಅರಣ್ಯ ಇಲಾಖೆ ಗಿಡಗಳನ್ನು ನೆಡಲು ಗುಂಡಿ ಅಗೆಸುತ್ತಿರುವುದು ಮಾತ್ರ ವಿಪರ್ಯಾಸ.
-ಎಚ್.ಬಿ. ನಿರಂಜನ ಮೂರ್ತಿ