ಬೆಂಗಳೂರು: ಒಂದೂವರೆ ಕೋಟಿ ರೂ. ಬೇಡಿಕೆಯಿಟ್ಟು ವೃದ್ದೆಯೊಬ್ಬರನ್ನು ಅಪಹರಿಸಿದ್ದ ಪ್ರಕರಣ ಸುಖ್ಯಾಂತ ಕಂಡಿದೆ. ಘಟನೆ ನಡೆದ 12 ಗಂಟೆಯೊಳಗೆ ಮೂವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಉತ್ತರ ವಿಭಾಗದ ಪೊಲೀಸರ ತಂಡ ಯಶಸ್ವಿಯಾಗಿದೆ. ಕೃಷ್ಣ (33), ವಿಜಯ್‌ಕುಮಾರ್ ಅಲಿಯಾಸ್ ವಿಜಿ ಮತ್ತು ಶ್ರೀನಿವಾಸ (35) ಎಂದು ಗುರುತಿಸಲಾಗಿದೆ.
ಮುತ್ಯಾಲನಗರ ನಿವಾಸಿ ಶಿವಕುಮಾರ್‌ಗೆ ಕರೆ ಮಾಡಿದ್ದ ದುಷ್ಕರ್ಮಿಗಳು “ನಿಮ್ಮ ತಾಯಿ ವಿಮಲಾ ಅವರನ್ನು ಅಪಹರಿಸಿದ್ದೇವೆ. ಒಂದೂವರೆ ಕೋಟಿ ರೂ. ನೀಡಿದಲ್ಲಿ ಬಿಡುಗಡೆ ಮಾಡುತ್ತೇವೆ,” ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಗಾಭರಿಗೊಂಡಿದ್ದ ಶಿವಕುಮಾರ್ ಜ.24ರಂದು ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾದ ಕೂಡಲೇ ಉತ್ತರ ವಿಭಾಗದ ಡಿಸಿಪಿ ಲಾಬೂರಾಮ್ ಮೂರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಪ್ರಕರಣ ದಾಖಲಾದ 12 ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿದೆ.
ಅಪಹರಣದ ಪ್ಲಾನ್ ಹೀಗಿತ್ತು: ಜ.24ರಂದು ಬೆಳಗ್ಗೆ 11.30ರ ಸುಮಾರಿಗೆ ಶಿವಕುಮಾರ್ ಮೊಬೈಲ್‌ಗೆ ಅನಾಮದೇಯ ಕರೆಯೊಂದು ಬಂದಿತ್ತು. ಅತ್ತಲಿಂದ ಮಾತನಾಡಿದ್ದವರು “ನಿಮ್ಮ ಮೊಬೈಲ್ ಸಂಖ್ಯೆಗೆ ಬಹುಮಾನ ಬಂದಿದೆ. ಬಹುಮಾನವನ್ನು ಬ್ಲೂ ಡಾರ್ಟ್ ಕೊರಿಯರ್ ಸರ್ವಿಸ್ ಮೂಲಕ ನೀಡಲಾಗುತ್ತಿದೆ. ನಮ್ಮಲ್ಲಿಗೆ ಬಂದು ಬಹುಮಾನ ಪಡೆದುಕೊಳ್ಳಿ,” ಎಂದು ಅವರು ತಿಳಿಸಿದ್ದರು. ಬಹುಮಾನದ ಬಗ್ಗೆ ವಿಚಾರಿಸಲೆಂದು ಶಿವಕುಮಾರ್ ಮನೆಯಿಂದ ತೆರಳಿದ್ದರು. ಆದರೆ, ಅಲ್ಲಿ ಹೋಗಿ ಪರಿಶೀಲಿಸಿದರೆ ಮಾಹಿತಿ ಸುಳ್ಳು ಎಂಬುದು ಗೊತ್ತಾಗಿತ್ತು.
ಇದೇ ಅವಧಿಯಲ್ಲಿ ಕಾರ್‌ನಲ್ಲಿ ಶಿವಕುಮಾರ್ ಅವರ ಮನೆ ಬಳಿ ಬಂದಿರುವ ಆರೋಪಿಗಳು ವಿಮಲಾ ಅವರ ಬಳಿ ಬಂದು ತಾವು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ. ನಿಮ್ಮ ಸೊಸೆ ಆತ್ಮಹತ್ಯೆಗೆ ಪ್ರಯತ್ನಿಸಿ, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿ ಕಾರ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಸ್ಪಲ್ಪ ದೂರ ಹೋದ ಬಳಿಕ ವಿಮಲಾ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಹೆಬ್ಟಾಳದಲ್ಲಿರುವ ವಿಜಯ್‌ಕುಮಾರ್ ಎಂಬಾತನ ಮನೆಗೆ ಕರೆದೊಯ್ದು ಕೂಡಿಹಾಕಿದ್ದಾರೆ. ನಂತರ ಮಾಂಗಲ್ಯ ಸರ ಮತ್ತು ಚಿನ್ನದ ಬಳೆಗಳನ್ನು ಕಿತ್ತುಕೊಂಡಿದ್ದಾರೆ.
ಈ ನಡುವೆ, ಬಹುಮಾನ ಕುರಿತು ವಿಚಾರಿಸಲು ಹೋಗಿದ್ದ ಶಿವಕುಮಾರ್, ಮನೆಗೆ ಹಿಂತಿರುಗಿದಾಗ ತಾಯಿ ಇರಲಿಲ್ಲ. ಹೊರಗೆ ಹೋಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ, ಸಂಜೆ 7 ಗಂಟೆ ಸುಮಾರಿಗೆ ಕರೆ ಮಾಡಿದ ಆರೋಪಿಗಳು “ನಿಮ್ಮ ತಾಯಿಯನ್ನು ಅಪಹರಿಸಲಾಗಿದೆ. ಒಂದೂವರೆ ಕೋಟಿ ರೂ. ನೀಡಬೇಕು. ಇಲ್ಲದಿದ್ದಲ್ಲಿ ಕೊಲೆ ಮಾಡುತ್ತೇವೆ,” ಎಂದು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ಆರೋಪಿಗಳನ್ನು 12ಗಂಟೆಗಳಲ್ಲಿ ಬಂಧಿಸಿದರು.
ಬಂಧಿತರಿಂದ ಮಾರುತಿ ಸ್ವಿಫ್ಟ್ ಡಿಸೈರ್ ಕಾರ್, ಒಂದು ದ್ವಿಚಕ್ರ ವಾಹನ, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಅಪಹರಣಕ್ಕೊಳಗಾದ ವೃದ್ಧೆಯನ್ನು ಸುರಕ್ಷಿತವಾಗಿ ಬಿಡುಗೊಳಿಸಿದ ಪೊಲೀಸರ ತಂಡದ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಶ್ಲಾ ಸಿದ್ದಾರೆ.
ಮಕ್ಕಳು ಒಳ್ಳೆ ಕೆಲಸದಲ್ಲಿದ್ದಾರೆಂದು ಕಿಡ್ನಾಪ್!: ವಿಮಲಾ ಅವರ ಮಗಳು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದು, ಮಕ್ಕಳೆಲ್ಲರೂ ಒಳ್ಳೆಯ ಕೆಲಸದಲ್ಲಿದ್ದಾರೆ. ಇವರನ್ನು ಅಪಹರಿಸಿದರೆ ಹಣ ಸಿಗುತ್ತದೆ ಎಂದು ಯೋಜನೆ ರೂಪಿಸಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಕೃಷ್ಣ ಅಪಹರಣಕ್ಕೆ ಸಂಚು ರೂಪಿಸಿದ್ದು, ಜೈಲಿನಲ್ಲಿರುವಾಗ ಇತರೆ ಆರೋಪಿಗಳಾದ ವಿಜಯ್‌ಕುಮಾರ್ ಮತ್ತು ಶ್ರೀನಿವಾಸ ಪರಿಚಯವಾಗಿತ್ತೆನ್ನಲಾಗಿದೆ. ಹಣಕ್ಕಾಗಿ ಮೂವರು ಸೇರಿ ಈ ಕೃತ್ಯ ಎಸಗಿದ್ದಾರೆ.