Advertisement

ಹಾಸ್ಟೆಲ್‌ ಕಟ್ಟಡಕ್ಕೆ ಅರ್ಧ ಕೋಟಿ ಬಾಡಿಗೆ!

12:28 PM Feb 18, 2020 | Suhan S |

ಕಡೂರು: ಹಿಂದುಳಿದ ವರ್ಗಗಳ ಇಲಾಖೆ(ಬಿಸಿಎಂ) ತಾಲೂಕಿನಲ್ಲಿ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳ ಹಾಗೂ ಕಚೇರಿಗಳ ಕಟ್ಟಡದ ವಾರ್ಷಿಕ ಬಾಡಿಗೆಗಾಗಿ ಸುಮಾರು ಅರ್ಧ ಕೋಟಿ ರೂ. ವೆಚ್ಚ ಮಾಡುತ್ತಿರುವುದು ತಿಳಿದುಬಂದಿದೆ.

Advertisement

ಕಡೂರು ಕ್ಷೇತ್ರಕ್ಕೆ ವಿದ್ಯಾರ್ಥಿ ನಿಲಯಗಳ ಕೊಡುಗೆನೀಡಿದ ದಿ. ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರ ಪರಿಶ್ರಮದಿಂದ ಸುಮಾರು 50ಕ್ಕೂ ಹೆಚ್ಚಿನ ವಿದ್ಯಾರ್ಥಿ ನಿಲಯಗಳನ್ನು ತೆರೆಸಿ ಸಾವಿರಾರು ಮಕ್ಕಳಿಗೆ ಉಚಿತ ವಸತಿ ಕಲ್ಪಿಸಿದ ಕೀರ್ತಿ ಕೆಎಂಕೆಗೆ ಸೇರುತ್ತದೆ. ಹಿಂದುಳಿದ ವರ್ಗಗಳ ಇಲಾಖೆಯಡಿ 32 ವಿದ್ಯಾರ್ಥಿ-ವಿದ್ಯಾರ್ಥಿನಿಯರ ನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಲ್ಲಿ 23 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳಿವೆ. ಉಳಿದಂತೆ 9 ವಿದ್ಯಾರ್ಥಿ ನಿಲಯಗಳನ್ನು ಬಾಡಿಗೆ ಕಟ್ಟಡಗಳಲ್ಲಿ ಕಳೆದ 15 ವರ್ಷಗಳಿಂದ ನಡೆಸಲಾಗುತ್ತಿದೆ. 9 ವಿದ್ಯಾರ್ಥಿ ನಿಲಯಗಳಿಗೆ ವಾರ್ಷಿಕ 50 ಲಕ್ಷ ರೂ. ಅನ್ನು ಬಾಡಿಗೆದಾರರಿಗೆ ನೀಡಲಾಗುತ್ತಿದೆ. ಬಾಡಿಗೆ ಕಟ್ಟಡಗಳ ಮಾಲಿಕರು ಪ್ರಭಾವಿಗಳಾಗಿದ್ದು, ಬರುವ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ನಿಯಂತ್ರಿಸುವ ಚಾಣಾಕ್ಷತನ ಹೊಂದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹಾಗೂ ವಿದ್ಯಾರ್ಥಿಗಳ ಪೋಷಕರಿಂದ ಕೇಳಿ ಬರುತ್ತಿವೆ.

ಕಳೆದ 15 ವರ್ಷಗಳಲ್ಲಿ ಕ್ಷೇತ್ರ ಮೂರ್‍ನಾಲ್ಕು ಶಾಸಕರನ್ನು ಕಂಡಿದೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ನಿಲಯಗಳ ಬಗ್ಗೆ ಗಮನ ಹರಿಸದಿರುವುದೇ ಮಾಲಿಕರಿಗೆ ಉತ್ತಮ ಬಾಡಿಗೆ ಬರಲು ಸಹಕಾರಿಯಾಗಿದೆ ಎಂಬ  ದೂರುಗಳು ಕೇಳಿ ಬರುತ್ತಿವೆ.

ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ನಿಲಯಗಳಲ್ಲಿ ಸರಿಯಾದ ಕಿಟಕಿಗಳಿಲ್ಲ. ಶೌಚಾಲಯ, ನೀರಿನ ಸಮಸ್ಯೆ ಹೆಚ್ಚಾಗಿದೆ. ಮಾಲಿಕರು ಗೃಹೋಪಯೋಗಕ್ಕಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನೇ ನೂರಾರು ವಿದ್ಯಾರ್ಥಿಗಳಿಗೆ ನೀಡಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂಬ ದೂರುಗಳು ವಿದ್ಯಾರ್ಥಿನಿಯರಿಂದ ಕೇಳಿ ಬಂದಿದೆ.ನಮ್ಮ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ತರುವುದು ಒಂದೇ, ಬಿಡುವುದೂ ಒಂದೇ ಎಂಬಂತಾಗಿದೆ ಎಂಬ ಆರೋಪಗಳು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ.

ತಾಲೂಕು ಬಿಸಿಎಂ ಅಧಿಕಾರಿ ನಾಗವಲ್ಲಿ ಅವರ ಪ್ರಕಾರ, ವಿದ್ಯಾರ್ಥಿ ನಿಲಯಗಳಿಗೆ ನಿವೇಶನಕ್ಕಾಗಿ ಕೋರಿಕೆ ಸಲ್ಲಿಸಿದ್ದು, ಕಡೂರು-ಬೀರೂರು ಪುರಸಭೆ ಆಡಳಿತ ನಿವೇಶನಗಳನ್ನು ನೀಡಿದೆ. ನಿವೇಶನಗಳನ್ನು ಇಲಾಖೆ ಹೆಸರಿಗೆ ಪಡೆದು ಕಟ್ಟಡ ನಿರ್ಮಿಸಲು ಇಲಾಖೆ ಸಿದ್ಧತೆ ನಡೆಸಿದೆ. ನಿವೇಶನ ಲಭ್ಯವಾಗಲಿದ್ದು, ಇದರ ಜೊತೆಗೆ ದಿ.ದೇವರಾಜ ಅರಸು ಭವನ ನಿರ್ಮಾಣ ಕಾರ್ಯವೂ ನಡೆಯಲಿದೆ. ಕಡೂರು, ದೇವನೂರು ಮತ್ತು ಬೀರೂರು ಪಟ್ಟಣಗಳಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಿದೆ. ಉಳಿದವುಗಳಿಗೆ ಇನ್ನೂ ಹಣ ಬಂದಿಲ್ಲ ಎಂದು ಮಾಹಿತಿ ನೀಡಿದರು.

Advertisement

ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಒಟ್ಟು 18 ವಿದ್ಯಾರ್ಥಿ ನಿಲಯಗಳು ನಡೆಯುತ್ತಿವೆ. ಯಾವುದೊಂದು ವಿದ್ಯಾರ್ಥಿ ನಿಲಯವೂ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿಲ್ಲ ಮತ್ತು ಯಾವುದೇ ಸಮಸ್ಯೆ ಇಲ್ಲ. ಆದರೆ, ಕಚೇರಿ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ. ಈಗಾಗಲೇ ಕಚೇರಿ ಕಟ್ಟಡ ನಿರ್ಮಿಸಲು ನಿವೇಶನ ದೊರೆತಿದೆ. ಇಲಾಖೆ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಿದ್ದು, ಅಲ್ಲಿಂದ ಗ್ರೀನ್ ಸಿಗ್ನಲ್‌ ದೊರೆತರೆ ಕಟ್ಟಡ ಕಾಮಗಾರಿ ಆರಂಭಿಸಲಾಗುತ್ತದೆ. -ಶಂಕರಮೂರ್ತಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ

ತಾವು ಕಳೆದ 3 ದಿನಗಳ ಹಿಂದೆ ಇಲಾಖೆಗೆ ಬಂದಿದ್ದು, ಹೆಚ್ಚಿನ ಮಾಹಿತಿ ಇಲ್ಲ. ಇಲಾಖೆಯ ತಾಲೂಕು ಮಟ್ಟದ ಅಧಿ  ಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ. –ಸೋಮಶೇಖರ್‌, ಜಿಲ್ಲಾ ಬಿಸಿಎಂ ಅಧಿಕಾರಿ

 

-ಎ.ಜೆ.ಪ್ರಕಾಶಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next