ಹಳೆಯಂಗಡಿ: ಇಲ್ಲಿನ ಹಳೆಯಂಗಡಿ ಗ್ರಾ.ಪಂ. ವ್ಯಾಪ್ತಿಯ ಕೊಳುವೈಲು ಎಂಬಲ್ಲಿ ಬುಧವಾರ ತಡರಾತ್ರಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ.
ಭಾರೀ ಮಳೆಗೆ ವಿದ್ಯುತ್ ಅಸ್ತವ್ಯಸ್ಥಗೊಂಡಿದ್ದಲ್ಲದೇ. ಸಿಡಿಲಿನಿಂದ ಹಳೆಯಂಗಡಿಯ ಕೊಳುವೈಲು ಪ್ರದೇಶದ ಮಾಲತಿ ಅವರ ಮನೆಯ ಆವರಣದಲ್ಲಿದ್ದ ತಾಳೆ ಮರಕ್ಕೆ ಸಿಡಿಲು ಬಡಿದು ಕ್ಷಣಾರ್ಧದಲ್ಲಿ ಬೆಂಕಿಗೆ ಹೊತ್ತಿ ಉರಿದಿದೆ.
ಸ್ಥಳೀಯರೊಬ್ಬರು ನೀರಿನ ಟ್ಯಾಂಕ್‌ನ ಮೂಲಕ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಅನಂತರ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವಲ್ಲಿ ಯಶಸ್ಸಾಗಿದೆ. ಸಿಡಿಲಿನ ಅಘಾತದಿಂದ ಮನೆಯ ವಿದ್ಯುತ್ ವಯರಿಂಗ್‌ಗೆ ಹಾನಿಯಾಗಿದೆ.
ಗ್ರಾಮಕರಣಿಕ ಮೋಹನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದ ಬ್ಯಾರಿಕೇಡ್‌ಗಳು ರಾತ್ರಿಯ ಭಾರೀ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿಯ ಮುಖ್ಯ ಜಂಕ್ಷನ್‌ನಲ್ಲಿ ಇದ್ದ ಬ್ಯಾರಿಕೇಡ್ ಗಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿತ್ತು.
ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು ಹಾಗೂ ನಾಗರಾಜ್ ಅವರು ಸ್ಥಳಕ್ಕೆ ಬಂದು ಇತರರೊಂದಿಗೆ ಸೇರಿ ಗಾಳಿ-ಮಳೆಯಲ್ಲಿಯೇ ಬ್ಯಾರಿಕೇಡ್‌ಗಳನ್ನು ರಸ್ತೆ ಬದಿಯಲ್ಲಿರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ಪ್ರಶಂಸೆಗೆ ಪಾತ್ರವಾಗಿದೆ.