ಹಳೆಯಂಗಡಿ: ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿಯೋರ್ವರು ವಾರದ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾವಂಜೆ ಬಳಿ ನಡೆದಿದೆ.
ಹಳೆಯಂಗಡಿ ಬಳಿಯ ಪಾವಂಜೆಯ ಕದ್ರಾತೋಟವ ನಿವಾಸಿ ದೇವದಾಸ್ (52) ಜು. 25ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ಏಕಾಏಕಿ ನಾಪತ್ತೆಯಾಗಿದ್ದ ಅವರ ಬಗ್ಗೆ ಕುಟುಂಬದವರು ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ನಾಪತ್ತೆಯಾದ ದೇವದಾಸ್ ಅವರ ಶವವು ಪಾವಂಜೆ ಹೆದ್ದಾರಿ ಬದಿಯ ಮನೆಯೊಂದರ ಕೋಣೆಯಲ್ಲಿ ಪತ್ತೆಯಾಗಿದೆ. ಶವದ ಪಕ್ಕದಲ್ಲಿಯೇ ಕೀಟನಾಶಕ ಸಿಂಪಡಿಸುವ ಔಷಧ ಪತ್ತೆಯಾಗಿದ್ದು, ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಸಂಶಯಿಸಿದ್ದಾರೆ.
ಮೃತ ಶರೀರ ಪತ್ತೆಯಾದ ಮನೆಯಲ್ಲಿ ಯಾರೂ ವಾಸವಾಗಿಲ್ಲ ದಿದ್ದನ್ನು ಗಮನಿಸಿಯೇ ಈ ಕೃತ್ಯ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಹಣಕಾಸಿನ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿರುವ ಬಗ್ಗೆ ಕುಟುಂಬದವರು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲ್ಕಿ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.