ಹಳೇಬೀಡು: ಫೆ.1ರಿಂದ 9ರವರಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಹಳೇಬೀಡು ಭರದ ಸಿದ್ಧತೆ ನಡೆಯುತ್ತಿದೆ. ಹಳೇಬೀಡು ಸಮೀಪದ ಮಾಯಗೊಂಡನಹಳ್ಳಿ ವಿಶಾಲ ಪ್ರದೇಶದಲ್ಲಿ ವೇದಿಕೆ ಹಾಗೂ ಭವ್ಯ ಮಂಟಪ ಸಿದ್ಧಗೊಳ್ಳುತ್ತಿದೆ. ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಹಳೇಬೀಡು ಪಟ್ಟಣವನ್ನು ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರೇ ಆಯ್ಕೆ ಮಾಡಿದ್ದು, ಪ್ರತಿಯೊಂದು ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದಾರೆ.
ಫ್ಲೆಕ್ಸ್,ಬ್ಯಾನರ್ ಭರಾಟೆ ಇಲ್ಲ: ಈ ಬಾರಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಎಲ್ಲಿಯೂ ಪ್ಲೆಕ್ಸ್, ಬ್ಯಾನರ್ ಹಾಕದಂತೆ ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ಆದೇಶಿಸಿದ್ದಾರೆ.
ಧರ್ಮ ಪೀಠ ಸ್ಥಾಪನೆ ನೆನಪಿಗೆ ನಡೆಯುವ ಉತ್ಸವ: 12ನೇ ಶತಮಾನದಲ್ಲಿ ವಿಶ್ವ ಬಂಧು ಮರುಳಸಿದ್ದರು ಸಮಾಜದ ಅಸಮಾನತೆ, ಜಾತಿ, ಶೋಷಣೆ ವಿರುದ್ಧ ಹೋರಾಟ ನಡೆಸಿದ್ದರು. ಹುಣ್ಣಿಮೆಯ ದಿನದಂದು ತಮ್ಮ ಶಿಷ್ಯ ತೆಲಗಬಾಳು ಸಿದ್ದರನ್ನು ಪೀಠದಲ್ಲಿ ನೇಮಿಸಿ ತರಳ ಬಾಳು ಎಂದು ಆರ್ಶಿರ್ವದಿಸಿದರು. ಈ ಐತಿಹಾಸಿಕ ದಿನದ ನೆನಪಿಗಾಗಿ ನಂತರ ಬಂದ ಮಠಾಧೀಶರು ಪ್ರತಿ ವರ್ಷ ಈ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಒಂದೊಂದು ಊರಿನಲ್ಲಿ ನಡೆಸುತ್ತಿದ್ದಾರೆ ಎಂದು ಸಮಿತಿಯ ಕೋಶಾದ್ಯಕ್ಷ ಕಾಂತರಾಜು ತಿಳಿಸಿದ್ದಾರೆ.
ಬರದ ಹಿನ್ನೆಲೆಯಲ್ಲಿ ಮುಂದೂಡಿದ್ದ ಉತ್ಸವ: ಹಳೇಬೀಡಿನಲ್ಲಿ ಕಳೆದ ವರ್ಷವೇ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಬೇಕಾಗಿತ್ತು. ಹಳೇಬೀಡು, ಮಾದಿಹಳ್ಳಿ, ಜಾವಗಲ್ ಸೇರಿದಂತೆ ಈ ಭಾಗದಲ್ಲಿ ಸರಿಯಾಗಿ ಮಳೆಯಾಗದೇ ಬರಗಾಲವುಂಟಾಗಿತ್ತು. ತರಳಬಾಳು ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿಯವರು ಹಳೇಬೀಡು ದ್ವಾರ ಸಮುದ್ರ ಕೆರೆ ಭರ್ತಿಯಾದಾಗ ಮತ್ತು ಈ ಭಾಗದಲ್ಲಿ ಸರಿಯಾಗಿ ಮಳೆ, ಬೆಳೆ ಬಂದಾಗ ತರಳಬಾಳು ಹುಣ್ಣಿಮೆ ಉತ್ಸವ ಆಚರಿಸೋಣ ಎಂದು ಹೇಳಿದ್ದರು.
ಈ ಬಾರಿ ಉತ್ತಮ ಮಳೆಯಾಗಿ ಹಳೇಬೀಡು ದ್ವಾರಸಮುದ್ರ ಕೆರೆ ತುಂಬುವ ಹಂತ ತಲುಪಿರುವುದರಿಂದ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಲು ಶ್ರೀಗಳು ಸೂಚಿಸಿರುವುರಿಂದ ಅದ್ಧೂರಿಯಾಗಿ ಆಚರಣೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಕಾರ್ಯಧ್ಯಕ್ಷ ಕೊರಟಿಕೆರೆ ಪ್ರಕಾಶ್ ತಿಳಿಸಿದ್ದಾರೆ.
ನೀರಾವರಿಗೆ ಹೆಚ್ಚು ಒತ್ತು: ದಶಕಗಳ ಕನಸಾಗಿರುವ ಹಳೇಬೀಡು ದ್ವಾರಸಮುದ್ರ ಕೆರೆಗೆ ರಣಘಟ್ಟ ಯೋಜನೆ ಮುಖಾಂತರ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವ ಮುಖ್ಯ ಗುರಿ ಮತ್ತು ಉದ್ದೇಶ ಹೊಂದಿದ್ದು, ಸರ್ಕಾರದ ಕಣ್ತೆರೆಸುವ ಮತ್ತು ನೀರಾವರಿ ಯೋಜನೆಯನ್ನು ಶೀಘ್ರ ಅನುಷ್ಠಾನಗಳಿಸಲು ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸುವುದರ ಮುಖಾಂತರ ಮಹೋತ್ಸವಕ್ಕೆ ಅರ್ಥ ನೀಡಲಾಗುತ್ತಿದೆ.
9 ದಿನಗಳ ಕಾರ್ಯಕ್ರಮ : ತರಳಬಾಳು ಹುಣ್ಣಿಮೆ ಮಹೋತ್ಸವ ಫೆ.1ರಿಂದ ಆರಂಭವಾಗಿ 9ರಂದು ಸಂಜೆ ಕಾರ್ಯಕ್ರಮ ಮುಕ್ತಾಯವಾಗಲಿದೆ. ಕಾರ್ಯಕ್ರಮದಲ್ಲಿ ಕೃಷಿ, ಶಿಕ್ಷಣ, ಧಾರ್ಮಿಕತೆ, ಆರೋಗ್ಯ ಸ್ಥಳೀಯ ಸಮಸ್ಯೆ, ಕವಿಗೋಷ್ಠಿ, ವಿಚಾರಗೋಷ್ಠಿ, ಇತಿಹಾಸ ಪರಂಪರೆ ಮೊದಲಾದ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿದೆ. ಆದಿಚುಂಚನಗಿರಿ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು, ಸಾಣೇಹಳ್ಳಿ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಡಿನ ಮುಖ್ಯಮಂತ್ರಿ ಹಾಗೂ ವಿವಿಧ ಇಲಾಖೆ ಸಚಿವರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
-ಎಂ.ಸಿ.ಕುಮಾರ್