ಬದಿಯಡ್ಕ: ಹಲಸು ಇಂದು ರಾಜ್ಯದಲ್ಲಿ ಶ್ರೇಷ್ಠಸ್ಥಾನವನ್ನು ಅಲಂಕರಿಸಿದ ಕಲ್ಪವೃಕ್ಷವಾಗಿದೆ. ಒಂದು ಕಾಲದಲ್ಲಿ ಬಡವರ ಪಾಲಿನ ಆಹಾರವಾದ ಹಲಸು ಇಂದು ಶ್ರೀಮಂತ ಸ್ಥಾನದಲ್ಲಿ ನೆಲೆನಿಂತಿದೆ. 33 ಕೋಟಿ ದೇವತೆಗಳ ಆವಾಸಸ್ಥಾನವಾದ ಗೋಮಾತೆಗೆ ಮೇವನ್ನು ನೀಡುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವು ಪುಣ್ಯಪ್ರದವಾದ ಕೆಲಸವಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳ ಮೇವಿನ ಉದ್ದೇಶದಿಂದ ಮುಳ್ಳೇರಿಯ ಹವ್ಯಕ ಮಂಡಲದ ಶಿಷ್ಯವೃಂದದವರ ನೇತೃತ್ವದಲ್ಲಿ, ಗೋಭಕ್ತರ ಹಾಗೂ ಬದಿಯಡ್ಕ ಮಹಿಳ್ಳೋದಯದ ಸಹಕಾರದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ “ಹಲಸು ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಸಬ್ ರಿಜಿಸ್ಟ್ರಾರ್ ಮುಹಮ್ಮದಾಲಿ ಪೆರ್ಲ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಮನುಷ್ಯ ಗೋವು ಹಲಸು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮನೆಕಟ್ಟುವ ಮೊದಲ ಹಂತದಲ್ಲಿ ಹಲಸಿನ ತುಂಡನ್ನು ನಾವು ಉಪಯೋಗಿಸುತ್ತೇವೆ. ಮನೆ ಕಟ್ಟಿದ ನಂತರವೂ ಮನೆಯ ಮುಂಭಾಗದಲ್ಲಿ ಹಲಸು ಇರುವುದು ಸರ್ವೇಸಾಮಾನ್ಯವಾಗಿದೆ. ನಶಿಸಿ ಹೋಗುವ ಸಂಪ್ರದಾಯಕ್ಕೆ ಹೊಸ ಮೆರಗನ್ನು ನೀಡಿ ಹವ್ಯಕ ಸಮುದಾಯದ ನೇತೃತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವು ಶ್ಲಾಘನೀಯವಾಗಿದೆ. ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿಯೂ ಹಲಸಿನ ಹಣ್ಣನ್ನು ಎಲ್ಲರೂ ಉಪಯೋಗಿಸುವಂತಾಗಬೇಕು ಎಂದ ಅವರು ಹಲಸಿನ ಪುನಶ್ಚೇತನಕ್ಕೆ ಈ ಕಾರ್ಯಕ್ರಮವು ಕಾರಣವಾಗಲಿ ಎಂದರು.
ಶ್ರೀರಾಮಚಂದ್ರಾಪುರಮಠದ ಗೋಕರ್ಣ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪ್ರತಿಯೊಂದು ಹಲಸು ಮೇಳಗಳು ನಮಗೆ ಸ್ಪೂರ್ತಿದಾಯಕವಾಗಿದೆ. ಪ್ರಕೃತಿಯಲ್ಲಿ ನಮಗೆ ಪೂರಕವಾದ ಅಂಶಗಳು ಪ್ರಕೃತಿದತ್ತವಾಗಿ ನಿರ್ಮಾಣವಾಗಿದ್ದರೂ ನಾವು ಅದನ್ನು ಗಮನಿಸುವುದಿಲ್ಲ. ಪ್ರತಿಯೊಂದು ವಸ್ತುವು ಪ್ರತಿಯೊಂದು ಜೀವಿಗೂ ಪರಸ್ಪರ ಪೂರಕವಾಗಿ ಆಹಾರರೂಪದಲ್ಲಿ ಹಾಗೂ ವಸ್ತುರೂಪದಲ್ಲಿ ನಮಗೆ ಒದಗಿಬರುತ್ತಿದೆ. ಈಗಾಗಲೇ ಹಲಸು ಕೇರಳ ರಾಜ್ಯದ ಫಲವೆಂದು ಅಂಗೀಕಾರವಾಗಿದೆ. ಹಲಸಿನಲ್ಲಿ ನಿರುಪಯುಕ್ತ ವಸ್ತುವೆಂಬುದಿಲ್ಲ. ಗೋವಿಗಾಗಿ ಹಮ್ಮಿಕೊಂಡ ಕಾರ್ಯಕ್ರಮವಿದಾಗಿದ್ದು ಹಲಸಿನ ಮೌಲ್ಯವರ್ಧನೆಗೆ ಕಾರಣವಾಗಿದೆ. ಹಲಸಿನ ಒಂದು ಕರೆಗೆ ಎಲ್ಲೆಡೆ ಒಂದು ತಿಂಗಳ ಕಾಲ ಹಲಸಿನ ಹಪ್ಪಳದ ಸಪ್ಪಳ ಕೇಳಿಬಂದಿದೆ. ಇದು ಇತರರಿಗೂ ಸ್ಪೂರ್ತಿಯಾಗಿ ಹಲಸಿನ ಸದ್ದು ಎಲ್ಲೆಡೆ ಮೊಳಗಲಿ, ಗೋಮಾತೆಯ ಚರಣಾರವಿಂದಕ್ಕೆ ಈ ಹಲಸು ಮೇಳ ಸಮರ್ಪಣೆಯಾಗಲಿ ಎಂದರು.
ವೇದಿಕೆಯಲ್ಲಿ ಮುಳ್ಳೇರಿಯ ಹವ್ಯಕ ಮಂಡಲ ದಿಗªರ್ಶಕ ಬಿ.ಜಿ. ರಾಮಭಟ್ ಗೋಳಿತ್ತಡ್ಕ, ಮುಳ್ಳೇರಿಯ ಮಂಡಲ ಅಧ್ಯಕ್ಷ ಪೊ.ಶ್ರೀಕೃಷ್ಣ ಭಟ್, ಮಂಡಲ ಕಾರ್ಯದರ್ಶಿ ಬಾಲ ಸುಬ್ರಹ್ಮಣ್ಯ ಸರ್ಪಮಲೆ, ಡಾ| ವೈ.ವಿ. ಕೃಷ್ಣಮೂರ್ತಿ, ಕುಸುಮ ಪೆರ್ಮುಖ, ಜಯ ಪ್ರಕಾಶ ಪಜಿಲ, ಕಾಸರಗೋಡು ಸಿಪಿಸಿಆರ್‌ಐಯ ವಿಜ್ಞಾನಿ ಡಾ| ಸರಿತಾ ಹೆಗ್ಡೆ, ವೆಂಕಟ ಕೃಷ್ಣ ಶರ್ಮ ಮುಳಿಯ ಉಪಸ್ಥಿತರಿದ್ದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ಹಲಸು ಮೇಳದ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೆರಡಾಲ ವಲಯ ಅಧ್ಯಕ್ಷ ಹರಿಪ್ರಸಾದ ಪೆರ್ಮುಖ ಧನ್ಯವಾದವನ್ನಿತ್ತರು. ಶಂಕರ ಪ್ರಸಾದ ಕುಂಚಿನಡ್ಕ, ಗುರುಮೂರ್ತಿ ನಾಯ್ಕಪು, ಚಂದ್ರಶೇಖರ ಏತಡ್ಕ, ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಣೆಗೈದರು. ಪ್ರಾರಂಭದಲ್ಲಿ ಶಿಷ್ಯವೃಂದದವರೆಲ್ಲ ಜೊತೆಗೂಡಿ ಗುರುವಂದನೆಯೊಂದಿಗೆ ಶ್ರೀಗುರುಗಳಿಗೆ ಚರಣಕಾಣಿಕೆಯನ್ನು ಸಮರ್ಪಿಸಿದರು.