Advertisement

ಮಿಸ್ಟರ್ ಹಾಲಪ್ಪ…ಅಭಿವೃದ್ಧಿ ಸಂಬಂಧ ಬಹಿರಂಗ ಚರ್ಚೆ; ಬೇಳೂರು ಸವಾಲು

05:20 PM Mar 30, 2023 | Vishnudas Patil |

ಸಾಗರ: ಮಿಸ್ಟರ್ ಹಾಲಪ್ಪ ಸಾಗರ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕೊಡುಗೆಯೇನು, ನಾನು ಮತ್ತು ಕಾಗೋಡು ನೀಡಿದ ಕೊಡುಗೆ ಏನು ಎನ್ನುವುದನ್ನು ಚರ್ಚೆ ಮಾಡಲು ಗಾಂಧಿ ಮೈದಾನಕ್ಕೆ ಬನ್ನಿ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಘೋಷಿತ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಸವಾಲು ಎಸೆದಿದ್ದಾರೆ.

Advertisement

ಇಲ್ಲಿನ ಮಹಿಳಾ ಸಮಾಜದ ಆವರಣದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಗರಕ್ಕೆ ಕುಡಿಯುವ ನೀರು ತರಲು 70 ಕೋಟಿ ರೂ. ಬಂದದ್ದು ನನ್ನ ಕಾಗೋಡು ಅವಧಿಯಲ್ಲಿ, ತಹಶೀಲ್ದಾರ್ ಕಚೇರಿ ನಿರ್ಮಾಣಕ್ಕೆ ಹಣ ಬಂದಿದ್ದು ಕಾಗೋಡು ಅವಧಿಯಲ್ಲಿ ಎನ್ನುವುದು ಮರೆಯಬೇಡಿ. ತಹಶೀಲ್ದಾರ್ ಕಚೇರಿಯನ್ನು ಈತನಕ ಲೋಕಾರ್ಪಣೆ ಮಾಡಲು ಆಗದ ನೀವು ಮಾವ ಅಳಿಯ ಏನು ಅಭಿವೃದ್ಧಿ ಮಾಡಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಚರ್ಚೆಗೆ ಬನ್ನಿ ಎಂದು ಸವಾಲು ಎಸೆದರು.

ನನಗೆ ಟಿಕೆಟ್ ಸಿಗುವುದಿಲ್ಲ ಎಂದು ಹಾಲಪ್ಪ ಹೋದಲ್ಲಿ ಬಂದಲ್ಲಿ ಹೇಳಿದ್ದರು. ಈಗ ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿದೆ. ಆದರೆ ಬಿಜೆಪಿಯಲ್ಲಿ ಹಾಲಪ್ಪ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಸಭೆಗಳನ್ನು ನಡೆಸಲಾಗುತ್ತಿದೆ. ಒಂದೊಮ್ಮೆ ಹಾಲಪ್ಪ ಅವರಿಗೆ ಟಿಕೆಟ್ ಕೊಟ್ಟರೆ ಮತದಾರರ ಕೈಕಾಲು ಹಿಡಿದು ಅವರನ್ನು ಸೋಲಿಸುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕರೇ ಸಭೆ ನಡೆಸಿ ಕರೆ ನೀಡುತ್ತಿದ್ದಾರೆ. ಎಂಡಿಎಫ್‌ನಲ್ಲಿ ಗಲಾಟೆ ಮಾಡಿಸಿ ಬ್ರಾಹ್ಮಣ ಸಮುದಾಯದ ಶ್ರೀಪಾದ ಹೆಗಡೆ, ಲಿಂಗಾಯಿತ ಸಮಾಜದ ಜಗದೀಶ್ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದೇ ಹಾಲಪ್ಪ ಅವರ ಸಾಧನೆಯಾಗಿದೆ. ಭ್ರಷ್ಟಾಚಾರದ ಹಣ, ಅಹಂಕಾರವನ್ನು ತುಂಬಿಕೊಂಡಿರುವ ಶಾಸಕ ಹಾಲಪ್ಪ ಅವರ ದಬ್ಬಾಳಿಕೆ ರಾಜಕಾರಣವನ್ನು ಸಾಗರ ಕ್ಷೇತ್ರದ ಜನರು ಸಹಿಸುವುದಿಲ್ಲ ಎಂದರು.

ಹಿಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಕಾರಣಕ್ಕೆ ಜನರು ಹಾಲಪ್ಪ ಕೈ ಹಿಡಿದಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಬಿಜೆಪಿ ವರ್ತನೆಯನ್ನು ರಾಜ್ಯದ ಜನರು ಯಾವತ್ತೂ ಕ್ಷಮಿಸುವುದಿಲ್ಲ. ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಒಂದೂ ನಿವೇಶನ ಕೊಟ್ಟಿಲ್ಲ, ತಮ್ಮ ನೆಂಟರಿಗೆ ಬಗರ್‌ಹುಕುಂ ಭೂಮಿ ಕೊಟ್ಟಿದ್ದಾರೆ. ಎಲ್ಲೆಂದರಲ್ಲಿ ಮದ್ಯದಂಗಡಿ ತೆರೆದು ಸಾಗರವನ್ನು ಗೋವಾವನ್ನಾಗಿ ಮಾರ್ಪಡಿಸುತ್ತಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಜನವಿರೋಧಿಯಾಗಿದೆ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯವಿದ್ದರೂ ಕಾಗೋಡು ನೇತೃತ್ವದಲ್ಲಿ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸುವ ಮೂಲಕ ಎಲ್ಲ ವರ್ಗದ ಹಿತಕಾಯುವ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಲು ಮನವಿ ಮಾಡಿದರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಎಲ್ಲ ವರ್ಗವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ, ಸಾಮಾಜಿಕ ನ್ಯಾಯ ಕಲ್ಪಿಸುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಏನೆಲ್ಲಾ ಸೌಲಭ್ಯ ಕೊಡುತ್ತೇವೆ ಎಂದು ಗ್ಯಾರೆಂಟಿ ಕಾರ್ಡ್ ಮೂಲಕ ಭರವಸೆ ನೀಡಿದ್ದಾರೆ. ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಅಭಿವೃದ್ಧಿ ನಿಂತ ನೀರಾಗಿದ್ದು, ಗೋಪಾಲಕೃಷ್ಣ ಬೇಳೂರು ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

Advertisement

ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ರಮೇಶ್ ಮಾತನಾಡಿದರು. ವೇದಿಕೆಯಲ್ಲಿ ಸುರೇಶಬಾಬು, ಮಧುಮಾಲತಿ, ಸುಮಂಗಲಾ ರಾಮಕೃಷ್ಣ, ಜ್ಯೋತಿ ಕೋವಿ, ರವಿಕುಮಾರ್, ಕೆ.ಹೊಳೆಯಪ್ಪ, ಮಕ್ಬೂಲ್ ಅಹ್ಮದ್, ಎಲ್.ಟಿ.ತಿಮ್ಮಪ್ಪ, ಗಣಪತಿ ಮಂಡಗಳಲೆ, ಸಬೀನಾ ತನ್ವೀರ್, ಅಣ್ಣಪ್ಪ ಭೀಮನೇರಿ, ತಸ್ರೀಫ್ ಇಬ್ರಾಹಿಂ, ಎಲ್.ಚಂದ್ರಪ್ಪ ಇನ್ನಿತರರು ಹಾಜರಿದ್ದರು. ತಾರಾಮೂರ್ತಿ ಸ್ವಾಗತಿಸಿದರು. ಮೈಕೆಲ್ ಡಿಸೋಜ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next