Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಮಾಜಿ ಶಾಸಕರು ನಾನು ಮರಳು ಸಾಗಾಣಿಕೆದಾರರಿಂದ ಹಣ ಪಡೆದಿದ್ದೇನೆ ಎಂದು ಆರೋಪಿಸಿದ್ದರು. ಜೊತೆಗೆ ನಾನು ಹಣ ತೆಗೆದುಕೊಂಡಿಲ್ಲ ಎಂದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಎಸೆದಿದ್ದಾರೆ. ಅವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಇದಕ್ಕಾಗಿ ಫೆ. 13ಕ್ಕೆ ದಿನಾಂಕ ನಿಗದಿ ಮಾಡಿದ್ದೇನೆ. ನನ್ನ ವಿರುದ್ಧ ಆರೋಪ ಮಾಡಿರುವ ಮಾಜಿ ಶಾಸಕರು ಧರ್ಮಸ್ಥಳಕ್ಕೆ ಬರಬೇಕು ಎಂದು ಹೇಳಿದರು.
Related Articles
Advertisement
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಇರುವಕ್ಕಿ ರೈತ ಪರ ಹೋರಾಟ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತಿನಲ್ಲಿ ಮೂರು ಬಡ ಬ್ರಾಹ್ಮಣ ಕುಟುಂಬವನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ದೀವರು, ಲಿಂಗಾಯಿತರು ಅಲ್ಲಿದ್ದರೆ ಒಕ್ಕಲೆಬ್ಬಿಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಕಾಗೋಡು ತಿಮ್ಮಪ್ಪ ಅವರಿಗೆ ವಯಸ್ಸಾಗಿದೆ, ಏನು ಗೊತ್ತಾಗುವುದಿಲ್ಲ ಬಿಡಿ ಎಂದು ಹೇಳಿದ್ದೇನೆ. ಕೆಲವರು ಅದನ್ನು ಬೇರೆ ರೀತಿ ತಿರುಚಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ನಾನು ಮರ ಕಡಿತಲೆ ಮಾಡುತ್ತಿರುವುದು ಸಿಗಂದೂರು ಆಣೆಯಾಗೂ ನನಗೆ ಬೇಸರ ತರುತ್ತಿದೆ ಎಂದು ಹೇಳಿದ್ದೇನೆಯೇ ವಿನಃ ಸಿಗಂದೂರು ಆಣೆಗೂ ಮರ ಕಡಿತಲೆ ಮಾಡಿಸುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಅಭಿವೃದ್ಧಿ ಆಗಬೇಕು ಎನ್ನುವ ಹಿನ್ನೆಲೆಯಲ್ಲಿ ಮರ ಕಡಿತಲೆ ಆದಷ್ಟು ಕಡಿಮೆ ಮಾಡಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಪ್ರಮುಖರಾದ ಸಂತೋಷ್ ಶೇಟ್, ಸತೀಶ್ ಕೆ., ರವೀಂದ್ರ ಬಿ.ಟಿ. ಇನ್ನಿತರರು ಹಾಜರಿದ್ದರು.