Advertisement
ಹಾಲಕೆರೆ ಅನ್ನದಾನೇಶ್ವರ ಯುವಕ ಮಂಡಳ ಕಟ್ಟಡದಲ್ಲಿ 1998ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಗ್ರಂಥಾಲಯ ತೆರೆದಿದೆ. ಅದರ ನಿರ್ವಹಣೆಗೆ ಗ್ರಂಥಪಾಲಕರನ್ನು ನೇಮಕ ಮಾಡಿದೆ. ಆದರೂ ಇಲ್ಲಿ ಸಿಬ್ಬಂದಿ ಕೊರತೆಯಿದೆ. ಗ್ರಂಥಾಲಯಕ್ಕೆ ಬೇಕಾದ ಮೂಲ ಸೌಲಭ್ಯ ಇಲ್ಲದೆ ಓದುಗರು ಪರದಾಡುವಂತಾಗಿದೆ. ಹಾಲಕೆರೆ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಇಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ. ಆದರೆ ಇಲ್ಲಿನ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಶಿಥಿಲಗೊಂಡ ಅನ್ನದಾನೇಶ್ವರ ಯುವಕ ಮಂಡಳಿಯ ಚಿಕ್ಕದಾದ ಕೋಣೆಯಲ್ಲಿ ಓದುಗರು ಅಧ್ಯಯನ ಮಾಡಬೇಕಿದೆ.
Related Articles
Advertisement
ಮೂತ್ರದ ಗಬ್ಬುನಾತ: ಗ್ರಂಥಾಲಯಕ್ಕೆ ಎರಡು ಬಾಗಿಲುಗಳಿದ್ದು, ಗ್ರಂಥಾಲಯದ ಮುಂದಿನ ಬಾಗಿಲು ತೆಗೆದರೆ ಮೂತ್ರ ವಿಸರ್ಜನೆಯ ಗುಬ್ಬುನಾತ ಸಹಿಸಲಾಸಾಧ್ಯವಾಗಿದೆ. ಕಟ್ಟಡದಲ್ಲಿ ಕೆಲ ಕಿಡಿಗೇಡಿಗಳು ಗುಟಕಾ ಹಾಕಿಕೊಂಡು ಅಲ್ಲಿಯೇ ಉಗುಳುತ್ತಿದ್ದಾರೆ. ಕಟ್ಟಡದ ಸುತ್ತ ಬಯಲು ಶೌಚ, ಮೂತ್ರ ಸೇರಿದಂತೆ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ.
ಗ್ರಾಮದ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ 1998ರಲ್ಲಿ ಗ್ರಂಥಾಲಯಕ್ಕೆ ಸ್ವಂತ ಜಾಗೆ ಹಾಗೂ ಕಟ್ಟಡ ಇಲ್ಲದೇ ಇರುವುದರಿಂದ ಅನ್ನದಾನೇಶ್ವರ ಯುವಕ ಮಂಡಳದ ಕಟ್ಟಡದಲ್ಲಿ ಪ್ರಾರಂಭಮಾಡಲಾಗಿತ್ತು. ಆರಂಭದಲ್ಲಿ ಕೇವಲ 500 ಪುಸ್ತಕಗಳು ಇದ್ದವು. ಸದ್ಯ ಈಗ 3334 ಪುಸ್ತಕಗಳು ಇವೆ. ಅಲ್ಲದೇ ರಾಜ್ಯಮಟ್ಟದ ಎರಡು ಪತ್ರಿಕೆಗಳು ಬರುತ್ತಿವೆ. ಹೆಚ್ಚು ಪತ್ರಿಕೆಗಳನ್ನು ಖರೀದಿ ಮಾಡುವುದಕ್ಕೆ ಅನುದಾನದ ಕೊರತೆಯಿದೆ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಅದರ ದುರಸ್ತಿಗೆ ಮುಂದಾಗಬೇಕು. ಸುಣ್ಣ ಬಣ್ಣ ಹಚ್ಚುವ ಕಾರ್ಯ ನಡೆಯಬೇಕು. –ಅಂದಪ್ಪ ರೊಟ್ಟಿ, ಗ್ರಂಥಾಲಯ ಮೇಲ್ವಿಚಾರಕ
-ಸಿಕಂದರ ಎಂ. ಆರಿ