Advertisement

ಹಳಗೇರಿ ಅರಣ್ಯ ಪ್ರದೇಶ ಇನ್ನು ಕೈಗಾರಿಕಾ ವಲಯ? ಸಾರ್ವಜನಿಕ ವಲಯದಲ್ಲಿ ಅಸಮಾಧಾನ

01:06 AM Mar 29, 2021 | Team Udayavani |

ಉಪ್ಪುಂದ: ಇಲ್ಲಿನ ಹಳಗೇರಿ ಯಲ್ಲಿರುವ ಅರಣ್ಯ ಪ್ರದೇಶವನ್ನು ಕೈಗಾರಿಕಾ ವಲಯವನ್ನಾಗಿಸುವ ಗ್ರಾ.ಪಂ ತೀರ್ಮಾನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿವೆ.

Advertisement

ಕಂಬದಕೋಣೆ ಗ್ರಾಮದ ಹಳಗೇರಿಯ ಸರ್ವೆ ನಂ.166 ರಲ್ಲಿ 30 ಎಕ್ರೆ ಪ್ರದೇಶವನ್ನು ಕೈಗಾರಿಕಾ ವಲಯ ಪ್ರದೇಶವನ್ನಾಗಿ ಗುರುತಿಸಿ ಗ್ರಾ.ಪಂ. ನಿರಾಪೇಕ್ಷಣೆ ನೀಡಲು ನಿರ್ಣಯ ಕೈಗೊಂಡಿರುವುದು ನಾಗರಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಆರೋಗ್ಯದ ಮೇಲೆ ಪರಿಣಾಮ!
ಈ ಪ್ರದೇಶವು ಹಳಗೇರಿಯ ಹೃದಯ ಭಾಗದಲ್ಲಿದ್ದು, ಜನ ವಸತಿ ಪ್ರದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿ ಕೈಗಾರಿಕೆಗಳು ಹುಟ್ಟಿ ಕೊಂಡಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯದಂತಹ ಅನೇಕ ಸಮಸ್ಯೆಗಳು ಜನರ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡಿ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎನ್ನುವುದು ಸ್ಥಳೀಯರ ಆತಂಕ.
.
ಕೃಷಿಕರಲ್ಲಿ ಆತಂಕ
ಈ ಪ್ರದೇಶಕ್ಕೆ ಹೊಂದಿಕೊಂಡು ಸುಮಾರು 500 ಎಕ್ರೆಗೂ ಹೆಚ್ಚು ಕೃಷಿ ಭೂಮಿ ಇದ್ದು ಸುಮಾರು 150 ಕ್ಕೂ ಹೆಚ್ಚು ಕುಟುಂಬಗಳು ಸಾಂಪ್ರದಾಯಿಕ ಕೃಷಿಯ ಮೇಲೆ ಅವಲಂಬಿತವಾಗಿದ್ದಾರೆ. ಗೊಬ್ಬರ ಮಾಡಲು ಒಣ ತರಗಲೆ ಹಾಗೂ ಸೊಪ್ಪನ್ನು ಉಪಯೋಗಿಸುತ್ತಾರೆ. ಈ ಅರಣ್ಯ ಪ್ರದೇಶವು ಜಾನುವಾರು ಮೇಯಿಸುವ ಸ್ಥಳವಾಗಿಯೂ ಗುರುತಿಸಿಕೊಂಡಿದೆ. ಹಳಗೇರಿಯ ಹೆಚ್ಚಿನ ಕಡೆ ಹೊಳೆ ಆವರಿಸಿದ್ದು ಕೃಷಿ ಸಂಬಂಧಿ ಸಂಪನ್ಮೂಲಗಳಿಗೆ ಬೇರೆ ಅರಣ್ಯಗಳನ್ನು ಅವಲಂಬಿಸುವಂತಿಲ್ಲ. ಈ ಅರಣ್ಯ ನಾಶವಾದರೆ ಕೃಷಿ ಅವಲಂಬಿತ ಕುಟುಂಬ ಸಂಕಷ್ಟಕ್ಕೀಡಾಗಿ ಜೀವನ ದುಸ್ತರವಾಗುತ್ತದೆ ಎನ್ನುವ ಆತಂಕ ಶುರುವಾಗಿದೆ.

ಅವೈಜ್ಞಾನಿಕ ತೀರ್ಮಾನ
ಅರಣ್ಯ ಪ್ರದೇಶವನ್ನು ಕೈಗಾರಿಕಾ ವಲಯಕ್ಕೆ ನೀಡುವುದು ಅವೈಜ್ಞಾನಿಕ. ಭೌಗೋಳಿಕವಾಗಿಯು ಕೈಗಾರಿಕೆಗೆ ಸೂಕ್ತ ವಾಗಿಲ್ಲ. ಮುಂದಿನ ದಿನಗಳಲ್ಲಿ ಜನರಿಗೆ ಇದರಿಂದ ಸಂಕಷ್ಟ ಎದುರಾಗಲಿದೆ ಆದರಿಂದ ಈ ಬಗ್ಗೆ ನಮ್ಮ ವಿರೋಧವಿದೆ. ಅಗತ್ಯವಿದ್ದರೆ ಪ್ರತಿಭಟನೆ ನಡೆಸಲು ಕೂಡಾ ಈಗಾಲೇ ತೀರ್ಮಾನಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಜೀವರಾಶಿ ನೆಲೆ ಕಳೆದುಕೊಳ್ಳುವ ಭೀತಿ
ಈ ಪ್ರದೇಶದಲ್ಲಿ ವಿವಿಧ ಜಾತಿಯ ಮರ, ಅನೇಕ ವನ್ಯ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಕೈಗಾರಿಕೆ ಪ್ರದೇಶವಾದರೆ ಮರಗಳು, ಪ್ರಾಣಿಗಳು ನಾಶವಾಗಲಿವೆ

Advertisement

ನೈಸರ್ಗಿಕ ವಿಕೋಪ ಸಾಧ್ಯತೆ
ಭೌಗೋಳಿಕವಾಗಿ ಈ ಪ್ರದೇಶವು ಕಿರು ಪರ್ವತ (ಗುಡ್ಡ)ದ ಇಳಿಜಾರಾಗಿದ್ದು ಕೈಗಾರಿಕೆಗೆ ಸೂಕ್ತವಾಗಿಲ್ಲ. ಕೈಗಾರಿಕೆಗಾಗಿ ಅರಣ್ಯ ಸ್ಥಳವನ್ನು ಸಮತಟ್ಟು ಮಾಡಿದಲ್ಲಿ ಹಿಂಭಾಗದ ಪರ್ವತದ ಭಾಗದಲ್ಲಿ ಭೂಕುಸಿತ ವಾಗಿ ನೈಸರ್ಗಿಕ ವಿಕೋಪದ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು. ಇದರಿಂದ ಸನಿಹದ‌ ಜನ ವಸತಿ ಪ್ರದೇಶಕ್ಕೂ ಅಪಾಯದ ಸಾಧ್ಯತೆ ತಳ್ಳಿಹಾಕುವಂತಿಲ್ಲ. ನೈಸರ್ಗಿಕವಾಗಿ ಹಳ್ಳ ದಿಣ್ಣೆಗಳಿಂದ ಕೂಡಿದ್ದು ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿದೆ. ಸಮತಟ್ಟು ಮಾಡಿದಲ್ಲಿ ಅಂತರ್ಜಲ ವೃದ್ಧಿ ಕುಂಠಿತವಾಗಿ ಜಲಕ್ಷಾಮ ಉಂಟಾಗಬಹುದು. ಅರಣ್ಯ ಪ್ರದೇಶವನ್ನು ಕೈಗಾರಿಕಾ ವಯಲಕ್ಕೆ ನೀಡುವುದು ಅವೈಜ್ಞಾನಿಕ, ಅಪ್ರಸ್ತುತ ನಿರ್ಧಾರ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next