Advertisement

ಹಾಲಾಡಿ ಪೇಟೆಗೆ ಹೊಸ ವಿನ್ಯಾಸದ ಸರ್ಕಲ್‌

12:21 AM Jun 20, 2019 | Team Udayavani |

ಕುಂದಾಪುರ:ಹಾಲಾಡಿ ಪೇಟೆಗೆ ಸರ್ಕಲ್‌ ಬೇಕೇ ಬೇಕು ಎನ್ನುವ ಗ್ರಾಮಸ್ಥರ ಬೇಡಿಕೆ ಹಾಗೂ ಇದರಂತೆ ಗ್ರಾಮಸಭೆಯಲ್ಲಿ ಪಂಚಾಯತ್‌ ಕಳುಹಿಸಿದ ನಿರ್ಣಯಕ್ಕೆ ಲೋಕೋಪಯೋಗಿ ಇಲಾಖೆಯು ಅಸ್ತು ಎಂದಿದ್ದು, ಸರ್ಕಲ್‌ ರಚನೆ ಕುರಿತಂತೆ ಹಳೆಯ ನಕ್ಷೆಯನ್ನು ಪರಿಷ್ಕರಿಸಿ, ಹೊಸದಾಗಿ ನಕ್ಷೆ ತಯಾರಿಸಿ, ಒಪ್ಪಿಗೆಗಾಗಿ ಪಂಚಾಯತ್‌ಗೆ ಕಳುಹಿಸಿದೆ.

Advertisement

ಕಳೆದ ಡಿ. 14ರಂದು ಹಾಲಾಡಿ ಗ್ರಾ.ಪಂ. ಅಧ್ಯಕ್ಷ ಸರ್ವೋತ್ತಮ ಹೆಗ್ಡೆ ಅಧ್ಯಕ್ಷತೆಯಲ್ಲಿ ಹಾಲಾಡಿ ಪೇಟೆಗೆ ಸರ್ಕಲ್‌ ಬೇಕು ಎನ್ನುವ ಕುರಿತು ವಿಶೇಷ ಗ್ರಾಮಸಭೆ ನಡೆದಿತ್ತು. ಸಭೆಯಲ್ಲಿ ಸರ್ಕಲ್‌ ಬೇಡಿಕೆಗೆ ಗ್ರಾಮಸ್ಥರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿ, ಈ ಸಂಬಂಧ ನಿರ್ಣಯ ಮಾಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಈ ನಿರ್ಣಯವನ್ನು ಮುಂದಿಟ್ಟು ಕೊಂಡು, ಮೊದಲು ನಕ್ಷೆ ಸಿದ್ಧಪಡಿಸಿದ್ದ ಬೆಂಗಳೂರಿನ “ಪ್ರಾಮಿ ಕಚೇರಿಗೆ ಮರು ವಿನ್ಯಾಸಕ್ಕೆ ಕಳುಹಿಸಲಾಗಿತ್ತು. ಅದೀಗ ಬಂದಿದೆ.

ಬ್ಲಾಕ್‌ ಸ್ಪಾಟ್‌ ಎನ್ನುವ ಹೆಸರಲ್ಲಿ ಹಾಲಾಡಿ ಪೇಟೆಯಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮುತುವರ್ಜಿಯಲ್ಲಿ 3.10 ಕೋ. ರೂ. ಮಂಜೂರಾಗಿತ್ತು. ಅದರಂತೆ ಈಗ ವಿರಾಜಪೇಟೆ – ಬೈಂದೂರು ರಾಜ್ಯ ಹೆದ್ದಾರಿ, ಹಾಲಾಡಿ – ಅಮಾಸೆಬೈಲು, ಕೋಟೇಶ್ವರ – ಹಾಲಾಡಿ ಕಡೆಗಳಿಗೆ ತೆರಳುವ ರಸ್ತೆ ಅಗಲೀಕರಣವಾಗಿದೆ. ಆದರೆ ಕೆಲವೆಡೆ ಜಾಗದ ತಕರಾರು ಇರುವುದರಿಂದ ಸರ್ಕಲ್‌ ನಿರ್ಮಾಣ ಬೇಡಿಕೆ ನನೆ ಗುದಿಗೆ ಬಿದ್ದಿತ್ತು. ಇದನ್ನರಿತ ಗ್ರಾಮಸ್ಥರು ಇದಕ್ಕಾಗಿ ಹೋರಾಟ ಸಮಿತಿ ರಚಿಸಿ ಈಡೇರಿಕೆಗೆ ಪ್ರಯತ್ನಿಸಿದ್ದರು.

ಮುಂದೇನು?
ಸರ್ಕಲ್‌ ನಿರ್ಮಾಣಕ್ಕೆ ಹೊಸ ನಕ್ಷೆ ರಚಿಸಲಾಗಿದೆ. ಆದರೆ ಅದಕ್ಕಾಗಿ 2-3 ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕಾಗಿದೆ. 2 ಕಡೆ ಪಟ್ಟಾ ಜಾಗವಿದ್ದು, ಅದಕ್ಕೆ ಎಸಿಯವರ ಮೂಲಕ ಒಪ್ಪಿಗೆ ಬೇಕಾಗಿದೆ. ಕೆಲವೆಡೆಗಳಲ್ಲಿ ಅಂಗಡಿ ಕಟ್ಟಿಕೊಂಡಿದ್ದು, ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಅಲ್ಲಿಂದ ತೆರವು ಮಾಡುವ ಕೆಲಸ ಪಂಚಾಯತ್‌ನಿಂದ ಆಗಬೇಕಾಗಿದೆ. ಇದೆಲ್ಲ ಆದ ಬಳಿಕ ಹೆಚ್ಚುವರಿ ಅನುದಾನಕ್ಕೆ ಬೆಂಗಳೂರಿನ ಪ್ರಾಮಿÕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅನಂತರ ಟೆಂಡರ್‌ ಪ್ರಕ್ರಿಯೆ ನಡೆಯುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಸರ್ಕಲ್‌ಗೆ ಎಲ್ಲ ಸಹಕಾರ
ಹಾಲಾಡಿ ಪೇಟೆಯಲ್ಲಿ ಸರ್ಕಲ್‌ ಆಗಬೇಕಾದರೆ ಗ್ರಾ.ಪಂ.ನಿಂದ ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತೇವೆ. ಅದಕ್ಕೆ ಪಂಚಾಯತ್‌ ವತಿಯಿಂದ ಏನೆಲ್ಲ ಆಗಬೇಕೋ ಅದನ್ನೆಲ್ಲ ಆದಷ್ಟು ಶೀಘ್ರದಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. ನಕ್ಷೆ ನಮಗೆ ಅಧಿಕೃತವಾಗಿ ಇನ್ನೂ ಸಿಕ್ಕಿಲ್ಲ. ಆದರೆ ಜನರ ಕೈಗೆ ಸಿಕ್ಕಿದೆ. ಈ ಬಗ್ಗೆ ಮತ್ತೂಮ್ಮೆ ಪರಿಶೀಲಿಸಿ, ಆ ಬಳಿಕ ಜನರ ಅಭಿಪ್ರಾಯದಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.
-ಸರ್ವೋತ್ತಮ ಹೆಗ್ಡೆ, ಅಧ್ಯಕ್ಷರು, ಹಾಲಾಡಿ ಗ್ರಾ.ಪಂ.

Advertisement

ಪಂಚಾಯತ್‌ಗೆ ಕಳುಹಿಸಲಾಗಿದೆ
ಈಗ ಹಳೆ ನಕ್ಷೆಯನ್ನು ಪರಿಷ್ಕೃರಣೆ ಮಾಡಿ ಪ್ರಾಮಿÕಯವರು ಹೊಸ ನಕ್ಷೆ ಕಳುಹಿಸಿದ್ದಾರೆ. ಇದನ್ನೀಗ ಪಂಚಾಯತ್‌ಗೆ ಕಳುಹಿಸಿದ್ದೇವೆ. ಅವರ ಒಪ್ಪಿಗೆ ಸಿಕ್ಕಿ, ಅಲ್ಲಿ ಜಾಗ ಒತ್ತುವರಿ ಇನ್ನಿತರ ಕೆಲ ಅಡೆತಡೆಗಳೆಲ್ಲ ಪರಿಹಾರವಾದರೆ ಮತ್ತೆ ಕಾಮಗಾರಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು.
– ದುರ್ಗಾದಾಸ್‌, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next