Advertisement

ನಾನು ಯಾರ ಹೆಸರನ್ನೂ ಶಿಫಾರಸು ಮಾಡಿಲ್ಲ : ಶ್ರೀನಿವಾಸ ಶೆಟ್ಟಿ

12:37 AM Apr 05, 2023 | Team Udayavani |

ಕುಂದಾಪುರ: ನನಗೆ ರಾಜಕೀಯ ಗುರು ಎಂದು ಯಾರೂ ಇಲ್ಲ. ವಿದ್ಯಾರ್ಥಿ ಜೀವನದಿಂದ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ 5 ವರ್ಷ ಜಯಗಳಿಸಿದ್ದೆ. ಈಗ ಪ್ರಕಟಿಸಿರುವುದು ರಾಜಕೀಯ ನಿವೃತ್ತಿ ಅಲ್ಲ; ಸ್ಪರ್ಧಾಕಣದಿಂದ ಹಿಂದೆ ಸರಿದದ್ದು ಮಾತ್ರ ಎಂದು ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

Advertisement

ಮನೆಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ನಾನು ಇಂಥವರಿಗೇ ಟಿಕೆಟ್‌ ನೀಡಬೇಕೆಂದು ಹೇಳುವ, ಸಲಹೆ ಕೊಡುವ ಜವಾಬ್ದಾರಿ ಹುದ್ದೆಯಲ್ಲಿಲ್ಲ. ನಾನು ಪಕ್ಷದ ಪದಾಧಿಕಾರಿಯಲ್ಲ, ರಾಜ್ಯಾಧ್ಯಕ್ಷನೂ ಅಲ್ಲ. ರಾಷ್ಟ್ರ ಮಟ್ಟ ದಲ್ಲಿ ನಿರ್ಣಯ ಆಗುತ್ತದೆ. ಆದ್ದರಿಂದ ಪಕ್ಷ ಯಾರಿಗೂ ಅವಕಾಶ ನೀಡಲಿ. ಎಲ್ಲರೂ ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸ ಬೇಕು ಎಂಬುದು ನನ್ನ ವಿನಂತಿ. 24 ವರ್ಷದ ರಾಜಕೀಯ ಜೀವನ ದಲ್ಲಿ ಜತೆಗಿದ್ದ, ಕೌಟುಂಬಿಕ ಜೀವನದಲ್ಲೂ ಒಡನಾಡಿ ಯಾದ ಕಿರಣ್‌ ಕೊಡ್ಗಿ ಅವರಿಗೆ ಟಿಕೆಟ್‌ ನೀಡಿದರೆ ಸಂತೋಷ ಎಂದರು.

ಬಿಜೆಪಿಯಿಂದ ಹಾಗೂ ಪಕ್ಷೇತರನಾಗಿ ಸ್ಪರ್ಧಿಸಿದಾಗ ಮತದಾರರು ಬೆಂಬಲಿಸಿ ಜನ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಪಕ್ಷೇತರನಾಗಿ ಗೆದ್ದಾಗ ಬಿಜೆಪಿ ಸೇರಲು ಆಹ್ವಾನ ಇದ್ದರೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸೇರಲಿಲ್ಲ. ಅವಧಿ ಮುಗಿದ ಬಳಿಕವೇ ಸೇರಿದೆ ಎಂದ ಅವರು, ಆರು ತಿಂಗಳ ಹಿಂದೆಯೇ ಯೋಚಿಸಿದ್ದೆ. ಅಧಿಕಾರದಲ್ಲಿದ್ದಾಗ ಇಂತಹ ನಿರ್ಧಾರ ಘೋಷಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗುತ್ತದೆ ಎಂದು ಪ್ರಕಟಿಸಲಿಲ್ಲ. ನೀತಿಸಂಹಿತೆ ಘೋಷಣೆ ಆಗುವ ವೇಳೆಗೂ ವಿಧಾನಸೌಧದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೆ. ಟಿಕೆಟ್‌ ಹಂಚಿಕೆ ಕುರಿತಾದ ರಾಜ್ಯ ಕೋರ್‌ಕಮಿಟಿ ಸಭೆಯಲ್ಲಿ ಮಾತನಾಡಲು ಸೂಚಿಸಿದಾಗ, ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ ಎಂದಿದ್ದೆ. ಪಟ್ಟಿ ಬಿಡುಗಡೆಯಾದಾಗ ನನ್ನ ಹೆಸರು ಬಂದು ನಾನು “ಬೇಡ’ ಎಂದರೆ ತಪ್ಪು ಭಾವನೆಗೆ ಕಾರಣವಾದೀತೆಂದು ಮೊದಲೇ ನಿರ್ಧಾರ ಪ್ರಕಟಿಸಿದೆ ಎಂದು ವಿವರಿಸಿದರು. “ಇದು ಚಂಚಲ ಮನಸಿನ ನಿರ್ಧಾರ ಅಲ್ಲ. ಹಾಗಾಗಿ ಮನ ವೊಲಿಕೆಯ ನಡೆ ಬರುವುದಿಲ್ಲ. ಶಾಸಕನಲ್ಲದಿದ್ದರೂ ಸಮಾಜದ ಜತೆಗಿರುವೆ. ಮುಂದೆ ಈ ಕ್ಷೇತ್ರದಲ್ಲಿ ಗೆಲ್ಲುವವರು ಸಾಮಾಜಿಕ ನ್ಯಾಯ ನೀಡಿ, ಸಿಆರ್‌ಝೆಡ್‌, ಡೀಮ್ಡ್ ಅರಣ್ಯ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿ, ಕಾರ್ಮಿಕರ ಸಮಸ್ಯೆಗಳ ಪರ ಶ್ರಮಿಸಬೇಕು. ಕುಂದಾಪುರವನ್ನು ಸಿಂಗಾಪುರ ಮಾಡಿ ಎಂದು ನಾನು ಹೇಳಲಾರೆ ಎಂದರು.

ಚುನಾವಣೆ ನಿರ್ವಹಣೆ ಸಮಿತಿಯಲ್ಲಿ ಮೂವರು ಹಾಲಿ ಶಾಸಕರಿಲ್ಲ
ಉಡುಪಿ, ಎ. 4: ರಾಜ್ಯ ಬಿಜೆಪಿಯು ಜಿಲ್ಲಾ ಚುನಾವಣೆ ನಿರ್ವಹಣ ಸಮಿತಿ ರಚಿಸಿದ್ದು, ಅದರಲ್ಲಿ ಹಾಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್‌. ಮೆಂಡನ್‌ ಹಾಗೂ ಬಿ.ಎಂ. ಸುಕುಮಾರ ಶೆಟ್ಟಿಯವರಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಿಲ್ಲ. ಸಚಿವ ಸುನಿಲ್‌ ಕುಮಾರ್‌ ಹಾಗೂ ಶಾಸಕ ಕೆ.ರಘುಪತಿ ಭಟ್‌ ಅವರನ್ನು ಸಂಪನ್ಮೂಲ ಸಂಗ್ರಹಣೆ/ನಿರ್ವಹಣೆ ಸಮಿತಿಯಲ್ಲಿ ಇರಿಸಲಾಗಿದೆ. ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷರಾದ ಕಿರಣ್‌ ಕೊಡ್ಗಿಯವರನ್ನು ಸಮಿತಿಯ ಸಹ ಸಂಚಾಲಕರನ್ನಾಗಿಸಲಾಗಿದೆ.

ಈ ಸಮಿತಿಯು ಚುನಾವಣ ಸಂದರ್ಭದಲ್ಲಿ ಮಹತ್ವದ್ದಾಗಿದ್ದು, ರಾಜ್ಯ ಮಟ್ಟ ದಿಂದ ಬರುವ ಎಲ್ಲ ಸೂಚನೆ, ನಿರ್ದೇಶನಗಳನ್ನು ಕೆಳಹಂತಕ್ಕೆ ತಲುಪಿ ಸುವ ಹೊಣೆಗಾರಿಕೆ ಇದೆ. ಸಂಘಟನೆ, ಪ್ರಚಾರ ಎಲ್ಲವನ್ನೂ ಈ ಸಮಿತಿ ಒಳಗೊಂಡಿದ್ದು, ಸಾಮಾನ್ಯವಾಗಿ ಹಾಲಿ ಶಾಸಕರಿಗೆ ಹೊಣೆ ಹಂಚಲಾಗುತ್ತದೆ.

Advertisement

ಹಲವು ಹೊಸ ಮುಖಗಳು ಮುನ್ನೆಲೆಗೆ
ಉಡುಪಿ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣೆ ರಾಜಕೀಯದಿಂದ ಹಿಂದೆ ಸರಿದ ಬೆನ್ನಲ್ಲೆ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್‌ ಕೊಡ್ಗಿ, ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಎ. ಸುವರ್ಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದು, ಜಿಲ್ಲಾ ಬಿಜೆಪಿಯಲ್ಲಿ ಹಲವು ಹೊಣೆ ನಿಭಾಯಿಸಿದ್ದ ಗುರುರಾಜ ಗಂಟಿಹೊಳೆ, ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ಜಯಪ್ರಕಾಶ್‌ ಹೆಗ್ಡೆ ಮತ್ತಿತರರ ಹೆಸರುಗಳು ಮುನ್ನೆಲೆಗೆ ಬಂದಿವೆ.
ಜಿಲ್ಲೆಯಲ್ಲಿ ಯಾವುದಾದರೂ ಎರಡು ಕ್ಷೇತ್ರದಲ್ಲಿ ಬಂಟ ಸಮುದಾಯ ಹಾಗೂ ಉಳಿದೆಡೆ ಬಿಲ್ಲವ, ಮೊಗವೀರ, ಬ್ರಾಹ್ಮಣ ಸಮುದಾಯಕ್ಕೆ ತಲಾ ಒಂದು ಕ್ಷೇತದಲ್ಲಿ ಅವಕಾಶ ನೀಡಬೇಕಾಗಬಹುದು. ಈ ಲೆಕ್ಕಾಚಾರದಡಿ ಯಾವ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್‌ ನೀಡಬಹುದು? ಯಾರನ್ನು ಮುಂದು ವರಿಸಬಹುದು ಎಂಬುದರ ಬಗ್ಗೆ ವರಿಷ್ಠರು ಜಿಲ್ಲಾ ತಂಡದ ಮಾಹಿತಿ ಪಡೆದು ಚರ್ಚಿಸು ತ್ತಿದ್ದಾರೆ. 2018 ರಲ್ಲೂ ಕಾಪು ಸೇರಿದಂತೆ ಚುನಾವಣೆಯಲ್ಲಿ ಕಾಪು ಕ್ಷೇತ್ರಕ್ಕೆ ಕೊನೇ ಗಳಿಗೆ ಯಲ್ಲಿ ಟಿಕೆಟ್‌ ಹಂಚಿಕೆ ಮಾಡಿದ್ದರು. ಈ ಬಾರಿಯೂ ಕೆಲವು ಕ್ಷೇತ್ರಗಳಿಗೆ ವಿಳಂಬವಾಗುವ ಸಂಭವವಿದೆ.

Advertisement

Udayavani is now on Telegram. Click here to join our channel and stay updated with the latest news.

Next