Advertisement

ಹಲಬರ್ಗಾ ಸಿದ್ರಾಮೇಶ್ವರ ಜಾತ್ರೆಗೆ ಚಾಲನೆ

02:25 PM Jan 04, 2022 | Team Udayavani |

ಬೀದರ: ಸಾಮಾಜಿಕ ಬದಲಾವಣೆಯಲ್ಲಿ ಮಠ-ಮಾನ್ಯಗಳ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಸಿವಿಲ್‌ ನ್ಯಾಯಾಧೀಶ ಸಿದ್ರಾಮ ಟಿ.ಪಿ ಅಭಿಪ್ರಾಯಪಟ್ಟರು.

Advertisement

ಭಾಲ್ಕಿ ತಾಲೂಕಿನ ಹಲಬರ್ಗಾ ರಾಚೋಟೇಶ್ವರ ಮಠದಲ್ಲಿ ಸಿದ್ರಾಮೇಶ್ವರರ 9ನೇ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜಕ್ಕೆ ಮಠಗಳ ಕೊಡುಗೆ ಅನನ್ಯ ಎಂದು ಹೇಳಿದರು. ಈಚಿನ ದಿನಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಈ ಪ್ರಕರಣಗಳಲ್ಲಿ ಎರಡೂ ಕಡೆಯವರು ವೇದನೆ ಅನುಭವಿಸಬೇಕಾಗುತ್ತಿದೆ. ಪೂರ್ವಾಪರ ಅರಿತು ನಿರ್ಣಯ ಕೈಗೊಳ್ಳುವ ಹಾಗೂ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಅಗತ್ಯ ಇದೆ ಎಂದರು.

ಬಸವ ಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಹೊಸ ವರ್ಷಾಚರಣೆ ನಮ್ಮ ಸಂಸ್ಕೃತಿ ಅಲ್ಲ. ಹಿಂದೂಗಳಿಗೆ ಯುಗಾದಿಯೇ ಹೊಸ ವರ್ಷ. ಪಾಶ್ಚಿಮಾತ್ಯ ಸಂಸ್ಕೃತಿಯ ಹೊಸ ವರ್ಷ ವ್ಯಾಪಾರ ತಂತ್ರವಾಗಿದೆ. ಈ ಆಚರಣೆಯು ಯುವಕರ ದಾರಿ ತಪ್ಪಿಸುತ್ತಿದೆ ಎಂದು ಬೇಸರ ಹೊರಹಾಕಿದರಲ್ಲದೇ ಹಿಂದಿನಿಂದಲೂ ಸಾಧುಗಳು, ಸಂತರು ದೇಶದ ಸಂಸ್ಕೃತಿ ಕಾಪಾಡಿಕೊಂಡು ಬಂದಿದ್ದಾರೆ. ಯುವಕರು ಶ್ರೇಷ್ಠವಾದ ಭಾರತೀಯ ಸಂಸ್ಕೃತಿಯನ್ನೇ ಅನುಸರಿಸಬೇಕು ಎಂದು ಹೇಳಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿ, ಸಮಾಜ ಸುಧಾರಣೆಗಾಗಿಯೇ ನಾವು ಜೋಳಿಗೆ ಹಾಕಿದ್ದೇವೆ. ಯುವಕರು ತಮ್ಮ ದುಶ್ಚಟಗಳನ್ನು ಜೋಳಿಗೆಗೆ ಹಾಕಬೇಕು. ಹಾವಗಿಲಿಂಗೇಶ್ವರ ಶಿವಾಚಾರ್ಯರು ಆಧ್ಯಾತ್ಮದ ಬೆಳಕನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ. ರಾಚೋಟೇಶ್ವರ ಮಠವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಮುಖಂಡ ಶಿವಯ್ಯ ಸ್ವಾಮಿ ಮಾತನಾಡಿ, ಕೆಲ ವಿದೇಶಿ ಶಕ್ತಿಗಳು ದೇಶದ ಸಂಸ್ಕೃತಿ ಹಾಗೂ ಸನಾತನ ಧರ್ಮವನ್ನು ಛಿದ್ರಗೊಳಿಸುವ ಪ್ರಯತ್ನ ಮಾಡುತ್ತಿವೆ. ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಬಾರದು. ಧರ್ಮ, ಸಂಸ್ಕೃತಿಯ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ತಿಳಿಸಿದರು.

Advertisement

ರಾಚೋಟೇಶ್ವರ ಮಠವು ಸಿದ್ರಾಮೇಶ್ವರರು ಜೀವಂತ ಸಮಾಧಿ ತೆಗೆದುಕೊಂಡ ಸ್ಥಳವಾಗಿದೆ. ಭಕ್ತರ ಎಲ್ಲ ಕಷ್ಟ, ಕಾರ್ಪಣ್ಯಗಳನ್ನು ನಿವಾರಿಸುತ್ತ ಬಂದಿದೆ. ಭಕ್ತರ ಕಲ್ಯಾಣವೇ ತಮ್ಮ ಪರಮ ಧ್ಯೇಯವಾಗಿದೆ ಎಂದು ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.

ಶಿರೂರಿನ ಜಯಸಿದ್ಧೇಶ್ವರ ಸ್ವಾಮೀಜಿ ಪ್ರವಚನ, ಕಲಾವಿದ ವಿಶ್ವನಾಥ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಮಾನೂರೆ, ಲೋಕಾಯುಕ್ತ ಅಭಿಯೋಜಕ ಕೇಶವ ಶ್ರೀಮಾಳೆ, ಜಿಪಂ ಲೆಕ್ಕ ಸಹಾಯಕ ಪ್ರವೀಣ ಸ್ವಾಮಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಗಂಗಾ ಪೂಜೆ, ಆರತಿ, ಸಿದ್ರಾಮೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಕಾರ್ಯಕ್ರಮ ಜರುಗಿದವು. ಹಲಬರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು. ಜಾತ್ರೆ ಜ.11ರ ವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next