Advertisement

1300 ಮಹಿಳೆಯರಿಂದ ಸ್ವತಂತ್ರವಾಗಿ ಹಜ್‌ ಯಾತ್ರೆ: ಪ್ರಧಾನಿ ಮೋದಿ

06:25 AM Jan 01, 2018 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಹಜ್‌ ಯಾತ್ರೆ ಹಾಗೂ ತ್ರಿವಳಿ ತಲಾಖ್‌ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ನಿಯಮದಲ್ಲಿ ಬದಲಾವಣೆ ಮಾಡಿದ್ದರಿಂದಾಗಿ ಈ ಬಾರಿ 1300 ಮಹಿಳೆಯರು ಹಜ್‌ ಯಾತ್ರೆಯನ್ನು ಸ್ವತಂತ್ರವಾಗಿ ಕೈಗೊಳ್ಳುತ್ತಿದ್ದಾರೆ. ಈ ಹಿಂದೆ ಮಹಿಳೆಯರು ಯಾರಾದರೂ ಪುರುಷರೊಂದಿಗೆ ಮಾತ್ರವೇ ಹಜ್‌ ಯಾತ್ರೆ ಕೈಗೊಳ್ಳಬಹುದಿತ್ತು ಎಂದು ಮೋದಿ ಹೇಳಿದ್ದಾರೆ.

Advertisement

ನನಗೆ ಈ ವಿಷಯ ಮೊದಲು ತಿಳಿಯುತ್ತಿದ್ದಂತೆಯೇ ಆಘಾತವಾಯಿತು. ಮುಸ್ಲಿಂ ಮಹಿಳೆಯರು ಹಲವು ವರ್ಷಗಳಿಂದಲೂ ಈ ವಿಷಯದಲ್ಲಿ ತಾರತಮ್ಯ ಅನುಭವಿಸುತ್ತಿದ್ದರೂ, ಈ ಬಗ್ಗೆ ಚರ್ಚೆಯೂ ನಡೆದಿರಲಿಲ್ಲ. ಈ ಸಂಬಂಧ ನಮ್ಮ ಅಲ್ಪಸಂಖ್ಯಾತ ಸಚಿವಾಲಯ ನಿರ್ದೇಶನ ಹೊರಡಿಸಿ, 70 ವರ್ಷಗಳ ಈ ಪದ್ಧತಿಯನ್ನು ನಿರ್ಮೂಲನೆಗೊಳಿಸಿದೆವು. ಅಷ್ಟೇ ಅಲ್ಲ, ಈ ಹಿಂದೆ ಮಹಿಳೆಯರಿಗೆ ಲಾಟರಿ ವ್ಯವಸ್ಥೆ ಇತ್ತು. ಇದನ್ನೂ ತೆಗೆದುಹಾಕಲಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲ ಮಹಿಳೆಯರಿಗೂ ಅವಕಾಶ ನೀಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ತ್ರಿವಳಿ ತಲಾಖ್‌ ವಿಚಾರವನ್ನೂ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಹಲವು ವರ್ಷಗಳ ಕಠಿಣ ಪರಿಶ್ರಮದ ನಂತರ ತ್ರಿವಳಿ ತಲಾಖ್‌ನಿಂದ ಮಹಿಳೆಯರು ಮುಕ್ತಿ ಹೊಂದುವ ಸಮಯ ಸನ್ನಿಹಿತವಾಗಿದೆ ಎಂದಿದ್ದಾರೆ. ಲೋಕಸಭೆಯಲ್ಲಿ ಮಸೂದೆ ಅನುಮೋದನೆಗೊಂಡ ನಂತರ ಮೋದಿ ಇದೇ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದಾರೆ. ಇನ್ನೊಂದೆಡೆ 2000 ನೇ ಇಸ್ವಿಯಲ್ಲಿ ಜನಿಸಿದವರಿಗೆ ಈ ವರ್ಷ ಮತ ಚಲಾವಣೆ ಹಕ್ಕು ಸಿಗುತ್ತದೆ. ಹೀಗಾಗಿ ಯವಕರಿಗೆ ಈ ವರ್ಷ ಮಹತ್ವದ್ದಾಗಿದೆ ಎಂದಿರುವ ಮೋದಿ, ಯೋಚಿಸಿ ಮತಚಲಾವಣೆ ಮಾಡುವುದು ಮುಖ್ಯ ಎಂದೂ ಹೇಳಿದ್ದಾರೆ. ಇನ್ನೊಂದೆಡೆ ಅಣಕು ಸಂಸತ್‌ ಕಲಾಪವನ್ನು ನಡೆಸುವ ಬಗ್ಗೆ ಪ್ರಸ್ತಾಪಿಸಿದ ಮೋದಿ, ಮುಂದಿನ ಆಗಸ್ಟ್‌ 15ರಂದು ದೆಹಲಿಯಲ್ಲಿ ಅಣಕು ಸಂಸತ್‌ ಕಲಾಪ ನಡೆಸಲಾಗುತ್ತದೆ. ಇದರಲ್ಲಿ 18 ರಿಂದ 25 ವರ್ಷದ ಯುವಕರು ಕುಳಿತು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದನ್ನು ನಂತರದಲ್ಲಿ ಎಲ್ಲ ಜಿಲ್ಲೆಗೂ ವಿಸ್ತರಿಸುವ ಬಗ್ಗೆ ಚಿಂತಿಸಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next