Advertisement

ಹಜ್‌ ಯಾತ್ರೆ: ಜು. 24ರಂದು ಮೊದಲ ತಂಡ ನಿರ್ಗಮನ

07:30 AM Jul 20, 2017 | Team Udayavani |

ಮಂಗಳೂರು: ಕರ್ನಾಟಕದಿಂದ ಹಜ್‌ ಯಾತ್ರೆಗೆ ತೆರಳುವವರ ಮೊದಲ ತಂಡವು ಮಂಗಳೂರು ವಿಮಾನ ನಿಲ್ದಾಣದಿಂದ ಜು. 24ರಂದು ನಿರ್ಗಮಿಸಲಿದೆ ಎಂದು ಕರ್ನಾಟಕ ರಾಜ್ಯ ಹಜ್‌ ಸಮಿತಿ ಸದಸ್ಯ ಕೆ.ಎಂ. ಅಬೂಬಕ್ಕರ್‌ ಸಿದ್ದೀಖ್‌ ಮೋಂಟುಗೋಳಿ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

24ರಿಂದ 26ರ ತನಕ ಪ್ರವಾಸ ಇರುತ್ತದೆ. 24ರಂದು ಮಧ್ಯಾಹ್ನ 1.30ಕ್ಕೆ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಯಾತ್ರೆಯ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಸಂಜೆ 4.15ಕ್ಕೆ ಮೊದಲ ವಿಮಾನ ನಿರ್ಗಮಿಸಲಿದೆ. ಅದಕ್ಕೂ ಮುನ್ನ ಪೂರ್ವಾಹ್ನ 11 ಗಂಟೆಗೆ ಕರ್ನಾಟಕ ರಾಜ್ಯ ಹಜ್‌ ಸಮಿತಿ ವತಿಯಿಂದ ಹಜ್‌ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ಜರಗಲಿದೆ ಎಂದರು.

ಜು. 25 ಮತ್ತು 26ರಂದು ಮಧ್ಯಾಹ್ನ 12.55 ಹಾಗೂ ಸಂಜೆ 4.15ಕ್ಕೆ ವಿಮಾನ ಹೊರಡಲಿದೆ. ಯಾತ್ರಿಕರು ತಮ್ಮ ಪ್ರಯಾಣದ ಎರಡು ದಿನ ಮುಂಚಿತವಾಗಿ ಮಂಗಳೂರು ಹಳೆ ವಿಮಾನ ನಿಲ್ದಾಣಕ್ಕೆ ತಮ್ಮ ಲಗೇಜ್‌,
ಕನ್ಫರ್ಮೇಶನ್‌ ಕಾರ್ಡ್‌ ಹಾಗೂ ಹಣ ಪಾವತಿ ರಶೀದಿಗಳ ಸಮೇತ ಬಂದು ನೋಂದಾಯಿಸಿಕೊಳ್ಳಬೇಕು ಎಂದವರು ತಿಳಿಸಿದರು.

ಹಸಿರು ಶ್ರೇಣಿಗೆ ಅರ್ಜಿ ಸಲ್ಲಿಸಿದವರ ಪೈಕಿ 19,734 ಅರ್ಜಿದಾರರನ್ನು ಸೌಲಭ್ಯಗಳ ಕೊರತೆಯಿಂದಾಗಿ ಅಝೀಝಿಯಾಕ್ಕೆ ವರ್ಗಾಯಿಸಲಾಗಿದ್ದು, ಅವರು ನೀಡಿರುವ ಹೆಚ್ಚುವರಿ ದರವನ್ನು ಹಿಂದಿರುಗಿಸಲಾಗುವುದು ಎಂದು ಕೇಂದ್ರ ಹಜ್‌ ಸಮಿತಿ ತಿಳಿಸಿದೆ. ಇದರಲ್ಲಿ ಕೆಲವು ಕನ್ನಡಿಗರೂ ಒಳಗೊಂಡಿದ್ದು, ಸಹಕರಿಸಬೇಕು ಎಂದು ಅವರು ವಿನಂತಿಸಿದರು.

ಹಜ್‌ ನಿರ್ವಹಣಾ ಸಮಿತಿ ಅಧ್ಯಕ್ಷ ಯೇನಪೊಯ ಮುಹಮ್ಮದ್‌ ಕುಂಞಿ, ಕಾರ್ಯದರ್ಶಿ ಎಸ್‌.ಎಂ. ರಶೀದ್‌, ಸದಸ್ಯ ಸಿ. ಮುಹಮ್ಮದ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next