Advertisement

ವಿವಾದ ಸ್ವರೂಪ ಪಡೆದ ಹಜ್‌ ಭವನ​​​​​​​

06:00 AM Jun 23, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಿರುವ ಹಜ್‌ ಭವನಕ್ಕೆ “ಟಿಪ್ಪು ಸುಲ್ತಾನ್‌’ ಹೆಸರು ನಾಮಕರಣ ಮಾಡುವ ವಿಚಾರ ವಿವಾದವಾಗಿ ಮಾರ್ಪಟ್ಟಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಕಾಳಗದಂತಾಗಿದೆ.

Advertisement

“”ಹಜ್‌ ಭವನಕ್ಕೆ ಸರ್ಕಾರದಿಂದ ಟಿಪ್ಪು ಸುಲ್ತಾನ್‌ ಅವರ ಹೆಸರಿಟ್ಟರೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಸಲಿದ್ದೇವೆ ಎಂದು ಸಂಸದೆ ಹಾಗೂ ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ” ಎಚ್ಚರಿಕೆ ನೀಡಿದ್ದಾರೆ.

“ಹಜ್‌ ಭವನಕ್ಕೆ ಟಿಪ್ಪು ಸುಲ್ತಾನ್‌ ಹೆಸರು ನಾಮಕರಣ ಮಾಡುವ ಪ್ರಸ್ತಾವನೆ ಇರುವುದು ಹೌದು ಆದರೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ” ಎಂದು ಹಜ್‌ ಸಚಿವ ಜಮೀರ್‌ ಅಹಮದ್‌ ವಿಧಾನಸೌಧದಲ್ಲಿ ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, “ಹಜ್‌ ಭವನಕ್ಕೆ ಟಿಪ್ಪು ಸುಲ್ತಾನ್‌ ಹೆಸರು ನಾಮಕರಣ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲೇ ಸಮ್ಮಿಶ್ರ ಸರ್ಕಾರ ಸಾಗುತ್ತಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ, ಟಿಪ್ಪು ಜಯಂತಿ ಆಚರಿಸಿ, ಚುನಾವಣೆಯಲ್ಲಿ 80 ಸೀಟಿಗೆ ಇಳಿದಿದೆ. ಯಾರಿಗೂ ಬೇಡವಾದ ಟಿಪ್ಪು ಬಗ್ಗೆ ಸಮ್ಮಿಶ್ರ ಸರ್ಕಾರಕ್ಕೆ ಯಾಕಿಷ್ಟು ಆಸಕ್ತಿ ಎಂಬುದು ತಿಳಿಯುತ್ತಿಲ್ಲ” ಎಂದರು.

“ಟಿಪ್ಪು ಓರ್ವ ಮತಾಂಧ, ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದಾನೆ. ಹಿಂದುಗಳನ್ನು ಮತಾಂತರ ಮಾಡಿದ್ದು, ಇದಕ್ಕೆ ಒಪ್ಪದವರನ್ನು ಟಿಪ್ಪು ಡ್ರಾಪ್‌ನಿಂದ ತಳ್ಳಿ ಸಾಯಿಸಿದ್ದಾನೆ. ಮೈಸೂರು ಮಹಾರಾಜರಿಗೆ ಅನ್ಯಾಯ ಮಾಡಿದ್ದಾನೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಬಾರದು. ಭವನಕ್ಕೂ ಟಿಪ್ಪು ಹೆಸರಿಡಬಾರದು” ಎಂದು ಆಗ್ರಹಿಸಿದರು.

Advertisement

“ಯಲಹಂಕದ ಹಜ್‌ ಭವನಕ್ಕೆ ಟಿಪ್ಪು ಹೆಸರಿಡಲು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹುನ್ನಾರ ನಡೆಸುತ್ತಿದ್ದಾರೆ. ಭವನದ ಶಂಕುಸ್ಥಾಪನೆ ಸಂದರ್ಭದಲ್ಲಿ ಇದೇ ಜಮೀರ್‌ ಅಹಮದ್‌  ರಂಪಾಟ ಮಾಡಿ ನೀರಿನ ಗ್ಲಾಸ್‌ಗಳನ್ನು ಒಡೆದು, ಸಭೆಯಿಂದ ಹೊರಗೆ ಹೋಗಿದ್ದರು. ಈಗ ಟಿಪ್ಪು ಹೆಸರಿಡಲು ಮುಂದಾಗಿದ್ದಾರೆ. ಇವರೆಗೆ ಯಾವ ನೈತಿಕತೆ ಇದೆ” ಎಂದು ಪ್ರಶ್ನಿಸಿದರು.

ಹಜ್‌ ಭವನ ನಿರ್ಮಾಣ 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು 40 ಕೋಟಿ ಅನುದಾನ ಮೀಸಲಿಟ್ಟಿದ್ದರು. 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಹಣ ಮಂಜೂರು ಮಾಡಿದ್ದರು. ನಂತರ ಕಾಂಗ್ರೆಸ್‌ ಸರ್ಕಾರ 20 ಕೋಟಿ ರೂ. ಹೆಚ್ಚುವರಿಯಾಗಿ ನೀಡಿದೆ.

ಹಜ್‌ ಯಾತ್ರೆಗೆ ಹೋಗುವ ಮುನ್ನ ಯಾತ್ರಿಗಳು ತಂಗಲು ಬೇಕಾದ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಇದರ ಜತೆಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿಯನ್ನು ನೀಡಲಾಗುತ್ತದೆ. ಹಜ್‌ ಭವನ ನಿರ್ಮಾಣಕ್ಕೂ ಮುನ್ನ ಯಾತ್ರಾರ್ಥಿಗಳು ರಸ್ತೆಯಲ್ಲಿ, ಬಸ್‌ಸ್ಟಾಂಡ್‌, ವಿಮಾನ ನಿಲ್ದಾಣದಲ್ಲಿ ಮಲಗುತ್ತಿದ್ದರು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬಿಜೆಪಿ ಸರ್ಕಾರ ಹಜ್‌ ಭವನದ ಸಂಕಲ್ಪ ಮಾಡಿತ್ತು. ಅದು ಈ ಸಾಕಾರವಾಗಿದೆ ಎಂದರು.

ಸಚಿವರು ಸ್ಪಂದಿಸುತ್ತಿಲ್ಲ
ರಾಜ್ಯದಲ್ಲಿ ನೆರೆ ಬಂದು ಜನ, ಜಾನುವಾರ ಸತ್ತರೂ ಸರ್ಕಾರ ಹಾಗೂ ಸಚಿವರು ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಹಿಂದಿನ ಸರ್ಕಾರದ ಚಾಳಿಯನ್ನೇ ಮುಂದುವರಿಸುತ್ತಿದೆ. ಅಭಿವೃದ್ಧಿಯ ಬದಲಿಗೆ ಸಚಿವ ಸ್ಥಾನದ ಕಿತ್ತಾಟದಲ್ಲೇ ನಿರತರಾಗಿದ್ದಾರೆ. ಮಂತ್ರಿಗಳು ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿಲ್ಲ, ಖಾತೆ ಗೊಂದಲದಲ್ಲೇ ಸರ್ಕಾರ ಮುಳುಗಿದೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.

ಯಾರು ಯಾವಾಗ ಬೇಕಾದರೂ ಡೈರಿ ಬರೆದುಕೊಳ್ಳಬಹುದು, ಸಚಿವ ಡಿ.ಕೆ. ಶಿವಕುಮಾರ್‌ ತಮ್ಮ ಬಳಿ ಇರುವ ಡೈರಿ ಬಹಿರಂಗಪಡಿಸಲಿ ಅಥವಾ ಇಡಿ, ಐಟಿ ಸೇರಿ ಯಾವುದೇ ತನಿಖಾ ಸಂಸ್ಥೆಗೆ ನೀಡಲಿ. ಬಿಜೆಪಿಯವರು ಯಾವುದಕ್ಕೂ ಹೆದರುವುದಿಲ್ಲ. ಎಲ್ಲ ರೀತಿಯ ತನಿಖೆಗೂ ಸಿದ್ಧರಿದ್ದೇವೆ.ಎಲ್ಲಾ ರಾಜಕೀಯ ಪಕ್ಷದಲ್ಲೂ ಉದ್ಯಮಿಗಳಿದ್ದಾರೆ. ಆದರೆ, ಅಕ್ರಮ ಮಾಡಿದವರ ವಿರುದ್ಧ ಕ್ರಮ, ತನಿಖೆಯಾಗುತ್ತಿದೆ. ಶಿಕ್ಷೆಯೂ ಆಗಲಿ.
– ಶೋಭಾ ಕರಂದ್ಲಾಜೆ

Advertisement

Udayavani is now on Telegram. Click here to join our channel and stay updated with the latest news.

Next