Advertisement

ಪ್ಲಾಸ್ಟಿಕ್‌ ನಿಷೇಧಿಸಲು ಜಾಗೃತಿ ಅಭಿಯಾನ ಆರಂಭಿಸಿ

12:37 PM Aug 24, 2019 | Naveen |

ಹಿರಿಯೂರು: ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ನಿಷೇಧ ಕುರಿತು ವಿಶೇಷ ಜಾಗೃತಿ ಅಭಿಯಾನ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ ಸೂಚಿಸಿದರು.

Advertisement

ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯಾದ್ಯಂತ ಈಗಾಗಲೇ ಪ್ಲಾಸ್ಟಿಕ್‌ ಬಳಕೆ ನಿಷೇಧ ಮಾಡಿದ್ದು, ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಿಗೆ ಈ ಅಭಿಯಾನ ಮುಂದುವರಿಯಲಿ ಎಂದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಪ್ರತಿಕ್ರಿಯಿಸಿ, ಜಿಲ್ಲೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯ ಸಮಿತಿಯ ಅಧ್ಯಕ್ಷರು ಭೇಟಿ ನೀಡಿದ್ದ ವೇಳೆ ಜಿಲ್ಲೆಯನ್ನು ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತಗೊಳಿಸಲು ಸೆ. 1ರ ಗಡುವು ನೀಡಿದ್ದಾರೆ. ಅಂಗಡಿ, ಮಳಿಗೆಗಳ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಬಳಸಲಾಗುತ್ತಿರುವ ಪ್ಲಾಸ್ಟಿಕ್‌ ವಶಪಡಿಸಿಕೊಂಡು, ಪ್ರಕರಣ ದಾಖಲಿಸಲಾಗುತ್ತಿದೆ. ಹೀಗಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಬಹುತೇಕ ಕಡಿಮೆಯಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿದ್ದು, ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಅಡ್ಡಿಯಾಗಿದೆ ಎಂದು ತಿಳಿಸಿದರು.

ಆಹಾರ ಧಾನ್ಯ ಪಡೆಯದಿದ್ದಲ್ಲಿ ಕಾರ್ಡ್‌ ರದ್ದು: ಜಿಲ್ಲೆಯಲ್ಲಿ ಶೇ. 81.99 ರಷ್ಟು ಬಿಪಿಎಲ್ ಪಡಿತರ ಕಾರ್ಡ್‌ದಾರರಿದ್ದು, ಅನರ್ಹರನ್ನು ಗುರುತಿಸುವ ಕಾರ್ಯ ಜಾರಿಯಲ್ಲಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಮಧುಸೂದನ್‌ ಸಭೆಗೆ ತಿಳಿಸಿದರು.

Advertisement

ಸತತವಾಗಿ 3 ತಿಂಗಳು ಆಹಾರ ಧಾನ್ಯ ಪಡೆಯದವರ ಪಡಿತರ ಕಾರ್ಡ್‌ ಅಮಾನತು ಮಾಡಲಾಗುವುದು. 6 ತಿಂಗಳವರೆಗೆ ಆಹಾರ ಧಾನ್ಯ ಪಡೆಯದಿದ್ದಲ್ಲಿ ಅಂತಹವರ ರೇಷನ್‌ ಕಾರ್ಡ್‌ ಅನ್ನು ರದ್ದುಪಡಿಸಬೇಕು. ಬಿಪಿಎಲ್ ಕುಟುಂಬಗಳಲ್ಲಿ ಮೃತಪಟ್ಟವರ ಹೆಸರನ್ನು ಪಡಿತರ ಕಾರ್ಡ್‌ನಿಂದ ತೆಗೆದು ಹಾಕುವ ಕಾರ್ಯವನ್ನು ತಪ್ಪದೇ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು.

ದಿನಕ್ಕೆರಡು ಬಾರಿ ಹಾಜರಾತಿ: ಜಿಲ್ಲೆಯ ಹಾಸ್ಟೆಲ್ಗಳಿಗೆ ಭೇಟಿ ನೀಡಿದ ವೇಳೆ ಬೆಳಗಿನ ಹಾಜರಾತಿಗೂ, ಸಂಜೆ ಹಾಸ್ಟೆಲ್ನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆಗೂ ವ್ಯತ್ಯಾಸ ಕಂಡು ಬಂದಿದೆ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿನ ಹಾಸ್ಟೆಲ್ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಉಳಿದೆಡೆ ಬೇಡಿಕೆ ಇಲ್ಲ. ಹೀಗಾಗಿ ಹಾಸ್ಟೆಲ್ನಲ್ಲಿ ಹೆಚ್ಚುವರಿ ಇರುವ ವಿದ್ಯಾರ್ಥಿಗಳನ್ನು ಕಡಿಮೆ ಸಂಖ್ಯೆಯಿರುವ ಹಾಸ್ಟೆಲ್ಗಳಿಗೆ ಮರು ಹಂಚಿಕೆಯಾಗಬೇಕಿದೆ. ಸದ್ಯ ಇರುವ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯಲ್ಲಿ ಹಿಂದಿನ ಹಾಜರಾತಿ ವಿವರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಪ್ರತಿಕ್ರಿಯಿಸಿದ ಕಾರ್ಯದರ್ಶಿ ಇನ್ನು ಮುಂದೆ ಹಾಸ್ಟೆಲ್ಗಳಲ್ಲಿ ದಿನಕ್ಕೆ ಎರಡು ಬಾರಿ ಬಯೋಮೆಟ್ರಿಕ್‌ ಹಾಜರಾತಿಯನ್ನು ಪಡೆಯಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಆಸ್ಪತ್ರೆಗಳ ಸ್ಥಿತಿಗತಿ ವಿಚಾರಿಸಿ, ಹೆರಿಗೆ ಪ್ರಮಾಣ ಕಡಿಮೆ ಇರುವ ಆಸ್ಪತ್ರೆಗಳಲ್ಲಿ ಸ್ತ್ರೀರೋಗ ತಜ್ಞರಿದ್ದಲ್ಲಿ, ಅಲ್ಲಿನ ತಜ್ಞ ವೈದ್ಯರನ್ನು ಹೆಚ್ಚು ಹೆರಿಗೆ ನಡೆಯುವ ಪ್ರದೇಶಗಳ ಆಸ್ಪತ್ರೆಗಳಿಗೆ ತಾತ್ಕಾಲಿಕ ನಿಯೋಜನೆ ಕೈಗೊಳ್ಳಲು ಸೂಚಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಇ-ಹಾಸ್ಪಿಟಲ್ ಸೇವೆಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಸಿ. ಸತ್ಯಭಾಮ ಮಾತನಾಡಿ, ನರೇಗಾ ಯೋಜನೆಯ ಸಾಧನೆಯಲ್ಲಿ ಜಿಲ್ಲೆ 8 ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕಲ್ಯಾಣಿ, ಗೋಕಟ್ಟೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಜಲಶಕ್ತಿ ಅಭಿಯಾನಕ್ಕೆ ಒತ್ತು ನೀಡಲಾಗಿದೆ ಎಂದರು. ಉಪವಿಭಾಗಾಧಿಕಾರಿ ವಿಜಯಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್‌, ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್‌, ಜಂಟಿ ಕೃಷಿ ನಿರ್ದೇಶಕ ಸದಾಶಿವ, ತೋಟಗಾರಿಕೆ ಉಪನಿರ್ದೇಶಕಿ ಸವಿತಾ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next