ಪ್ರತಿಸಲ ನಾನು ಹೋಗುವ ಕಟ್ಟಿಂಗ್ ಶಾಪ್ ಇಂದು ತೆರೆದಿರಲಿಲ್ಲ. ನಾನು ಇನ್ನೊಂದು ಕಡೆ ಹೋಗಬೇಕಾಯಿತು. ಅಲ್ಲಿ ಒಬ್ಬ ದಢೂತಿ ವ್ಯಕ್ತಿ ನಿಂತಿದ್ದ. ಈತ ಮಾಂಸ ಕತ್ತರಿಸುವವನೋ ಅಥವಾ ಕೂದಲು ಕತ್ತರಿಸುವವನೋ ಎಂಬ ಅನುಮಾನ ಒಮ್ಮೆ ನನ್ನನ್ನು ಕಾಡಿತು. “ಬನ್ನಿ ಕುಳಿತುಕೊಳ್ಳಿ’ ಎಂದ. ಒಮ್ಮೆ ನನ್ನನ್ನು ತಿನ್ನುವ ಹಾಗೆ ನೋಡಿದ. ಆಮೇಲೆ ಅಲ್ಲೇ ನಕ್ಕುಬಿಟ್ಟ . ನನಗೆ ಸಿಟ್ಟು ತಡೆದುಕೊಳ್ಳಲಾಗದೆ ಕೇಳಿದೆ “ನಗುವುದಕ್ಕೇನಿದೆ?’
“”ತಲೆಯಲ್ಲಿ ಇರುವುದೇ ಮೂರು ಕೂದಲು, ಅದರಲ್ಲಿ ಚಂದ ಕತ್ತರಿಸಲಿಕ್ಕೆ ಏನುಂಟು? ಮುಕ್ಕಾಲು ತಲೆ ನುಣ್ಣಗುಂಟು, ಉಳಿದದ್ದನ್ನೂ ನುಣ್ಣಗೆ ಮಾಡಿಬಿಡ್ತೇನೆ, ಹಿಂದಿ ಫಿಲ್ಮ್ ವಿಲನ್ ತರಹ ಕಾಣುತ್ತದೆ” ಎಂದು ಅಣಕವಾಡಿದ.””ಅದೆಲ್ಲ ಏನೂ ಬೇಡ, ಕಿವಿಯ ಹತ್ತಿರ ಸಣ್ಣ ಮಾಡು ಸಾಕು” ಎಂದೆ.ನಾನು ಹೇಳಿದಷ್ಟು ಮಾಡಿ, “”ನೂರು ಕೊಡಿ” ಅಂದ. ಮತ್ತೆ ನನಗೆ ಸಿಟ್ಟು ಬಂತು.
“”ಅಲ್ಲ , ತುಂಬಾ ಕೂದಲಿದ್ದವರಿಗೆಲ್ಲಾ ಅರವತ್ತು ರೂಪಾಯಿ, ನನಗ್ಯಾಕೆ ನೂರು?” ಎಂದು ಗುರಾಯಿಸಿದೆ. “”ಸ್ವಾಮಿ, ನಿಮಗೆ ಕಟ್ಟಿಂಗ್ ಮಾಡುವುದು ಎಷ್ಟು ಕಷ್ಟ ಗೊತ್ತುಂಟಾ? ಇರುವ ನಾಲ್ಕು ಕೂದಲನ್ನು ಹೆಕ್ಕಿ ಹೆಕ್ಕಿ ಕತ್ತರಿಸಬೇಕು. ಎರಡು ಜನರಿಗೆ ಕೌÒರ ಮಾಡುವಷ್ಟು ಟೈಮ್ ತಗೊಳ್ತದೆ, ಕತ್ತರಿಯನ್ನು ತುಂಬಾ ಜಾಗ್ರತೆಯಿಂದ ಆಡಿಸಬೇಕು. ಎಲ್ಲಿಯಾದರೂ ನಿಮ್ಮ ನುಣ್ಣನೆ ತಲೆಗೆ ಕತ್ತರಿ ತಾಗಿದರೆ ನನ್ನನ್ನು ಸುಮ್ಮನೆ ಬಿಡುತ್ತೀರಾ ನೀವು? ಇರಲಿ ತೊಂಬತ್ತು ಕೊಡಿ” ಎಂದು ಸ್ವಲ್ಪ ಗಂಭೀರವಾಗಿಯೇ ನುಡಿದ.ನೂರರ ನೋಟನ್ನು ಅವನ ಕೈಗಿತ್ತು, ಹತ್ತರ ನೋಟನ್ನು ವಾಪಸು ತೆಗೆದುಕೊಳ್ಳದೆ ಬಂದೆ.
ಇನ್ನಂಜೆ ಭಟ್ಟರು ಮೊನ್ನೆ ಕೇಳಿದ ಪ್ರಶ್ನೆ ಇವತ್ತು ನನ್ನನ್ನು ತುಂಬಾ ಆವರಿಸಿತು. ಮೊನ್ನೆ ಮಾತನಾಡುತ್ತ ನನ್ನ ತಲೆಯತ್ತ ಕಣ್ಣು ಹಾಯಿಸಿದ ಅವರು, “”ಹೀಗೆ ಕೇಳೆ¤àನೆ ಅಂತ ಬೇಜಾರು ಮಾಡಬೇಡಿ, ನಿಮಗೆ ಕೂದಲು ಉದುರಿಧ್ದೋ ಅಥವಾ ಇನ್ನು ಹುಟ್ಟಬೇಕಷ್ಟೆಯೋ?” ಎಂದು ಕೇಳಿದ್ದು. ಇವರ ಮಾತಿಗೆ ಉಪ್ಪು ಸೇರಿಸುವಂತೆ ಕಪೆì ನಾಯಕರು “”ನೀವು ಮುಖ ಎಲ್ಲಿ ತನಕ ತೊಳೆಯುತ್ತೀರಿ?” ಎಂದು ಬಿಳಿಯ ಹಲ್ಲುಗಳನ್ನು ತೋರಿಸಿದಾಗ ನನಗೆ ಮುಜುಗರವಾಯಿತಾದರೂ ತುಂಬಾ ಆತ್ಮೀಯರೆಂಬ ಕಾರಣಕ್ಕೆ ಮಾತು ಬದಲಾಯಿಸಿ ಅಲ್ಲಿಂದ ಎದ್ದು ಬಂದೆ.
ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಉದ್ದುದ್ದ ಕೂದಲನ್ನು ಬಿಟ್ಟು ದಿನಕ್ಕೊಂದೊಂದು ಹೇರ್‌ಸ್ಟೈಲ್ ಮಾಡಿಕೊಂಡು ಹುಡುಗಿಯರ ಹಿಂದೆ ಸುತ್ತಿದ್ದು , ಕೆಲವು ಹುಡುಗಿಯರು ನನ್ನ ಹಿಂದೆ ಸುತ್ತಿದ್ದು ಸುಳ್ಳೇ ಅನ್ನಿಸುವಷ್ಟು ನನ್ನ ತಲೆ ಬೊಕ್ಕತಲೆಯಾದದ್ದು ಮಾತ್ರ ಮನದೊಳಗೇ ಉರಿಯುತ್ತಿರುವ ಆರದ ನೋವಿನ ಕೆಂಡ. ಕಂಡ ಕಂಡ ಡಾಕ್ಟರ್‌ಗಳಿಗೆ ತೋರಿಸಿ, ಅದೂ-ಇದೂ ಔಷಧಿಗಳನ್ನು ವರುಷಗಟ್ಟಲೆ ಕುಡಿದರೂ ಕೂದಲುದುರುವುದು ನಿಲ್ಲಲಿಲ್ಲ. ಕೆಲವರು ಚಿಂತಿಸುವುದನ್ನು ಬಿಡಿ ಎಂದು ಸಲಹೆ ಕೊಟ್ಟರೂ, ಕೂದಲುದುರುತ್ತದಲ್ಲ ಎಂಬುದೇ ದೊಡ್ಡ ಚಿಂತೆಯಾಗಿ ಬೇಗನೆ ಬೊಕ್ಕ ತಲೆಯಾಗಿಬಿಟ್ಟಿತು. ಟಿವಿ, ಪೇಪರುಗಳಲ್ಲಿ ಜಾಹೀರಾತು ಕೊಡುವ ಎಲ್ಲ ಕಂಪೆನಿಗಳ ತೈಲವನ್ನು ಮೆತ್ತಿಕೊಂಡರೂ ಕೂದಲಿನೊಂದಿಗೆ ದುಡೂx ಖಾಲಿಯಾಯಿತೇ ವಿನಃ ಒಂದೇ ಒಂದು ಕೂದಲು ಹುಟ್ಟಲಿಲ್ಲ.
ಇತ್ತೀಚೆಗಂತೂ ಆಫೀಸಿನಲ್ಲಿರುವ, ದಾರಿಯಲ್ಲಿ ಸಿಗುವ ಚಂದ-ಚಂದದ ತರುಣಿಯರು ನನ್ನ ತಲೆಯನ್ನು ನೋಡಿ ಮುಸಿ ಮುಸಿ ನಗುತ್ತಿರುವುದು ದೊಡ್ಡ ತಲೆನೋವಾಗಿ, ಆಪ್ತಮಿತ್ರನಲ್ಲಿ ಹೇಳಿಕೊಂಡಾಗ ವಿಗ್ ಹಾಕೆಂದು ಕೊಟ್ಟ ಸಲಹೆಯನ್ನು ಸ್ವೀಕರಿಸಿ ನನಗೆ ಒಪ್ಪುವ ವಿಗ್‌ನ್ನು ಹಾಕಿಕೊಂಡು ಆಫೀಸಿಗೆ ಕಾಲಿಟ್ಟರೆ ಅದೇ ತರುಣಿಯರು, ಇನ್ನು ಕೆಲವು ತರುಣರೆಲ್ಲರೂ ಸೇರಿ ಗೊಳ್ಳೆಂದು ನಕ್ಕು ಆಡಿಕೊಂಡಿದ್ದು ನನಗೆ ಹಿಡಿಸದೆ, ತಿರುಗಿ ಕೇಳಲೂ ಆಗದೆ ವಿಗ್ ಹಾಕುವುದನ್ನು ಬಿಟ್ಟುಬಿಟ್ಟೆ .
ಅದೇ ದಿನ ಕಟ್ಟಿಂಗ್ ಶಾಪಿಗೆ ಹೋಗಿ, ಅದೇ ದಢೂತಿ ಮನುಷ್ಯನಿಗೆ ಉಳಿದಿರುವ ಕೂದಲನ್ನು ನುಣ್ಣಗೆ ತೆಗೆಯುವಂತೆ ಹೇಳಿದೆ. “”ಫುಲ್ ಶೇವಿಂಗ್ ಮಾಡಿ ಬಿಡ್ಲಾ?” ಎಂದು ಹಲ್ಕಿರಿದ. “ನಿನ್ನಿಷ್ಟ’ ಎಂದು ನಾನೂ ಸಣ್ಣಗೆ ನಕ್ಕೆ.
– ಹೊಸ್ಮನೆ ವಿಷ್ಣು ಭಟ್ಟ