ಅಗರ್ತಾಲಾ(ತ್ರಿಪುರಾ): ಮಾರಣಾಂತಿಕ ಕೋವಿಡ್ 19 ಸೋಂಕು ಮುಕ್ತ ರಾಜ್ಯ ಎಂದು ಘೋಷಿಸಿಕೊಂಡಿದ್ದ ತ್ರಿಪುರಾದಲ್ಲಿ ಸುರಿದ ಧಾರಾಕಾರ ಆಲಿಕಲ್ಲು ಮಳೆಗೆ ಮೂರು ಜಿಲ್ಲೆಗಳ ಸುಮಾರು 4,200 ಜನರು ನಿರಾಶ್ರಿತರಾಗಿದ್ದು, 5,500ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆಲಿಕಲ್ಲು ಮಳೆಯಿಂದ ಅತೀ ಹೆಚ್ಚು ಹಾನಿಗೀಡಾದ ಸೆಪಾಹಾಜಾಲಾ ಜಿಲ್ಲೆಗೆ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತ್ರಿಪುರಾದ ಪಶ್ಚಿಮ ತ್ರಿಪುರಾ ಹಾಗೂ ಖೋವಾಯಿ ಜಿಲ್ಲೆಗಳು ಕೂಡಾ ತೀವ್ರ ಹಾನಿಗೊಳಗಾಗಿದೆ ಎಂದು ವರದಿ ತಿಳಿಸಿದೆ.
ಸುಮಾರು 5 ಸಾವಿರ ಮನೆಗಳು ಹಾನಿಗೊಳಗಾಗಿದ್ದು, 4,200ಕ್ಕೂ ಅಧಿಕ ಜನರನ್ನು ನಿರಾಶ್ರಿತ ಶಿಬಿರಕ್ಕೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದೆ.
ಸೆಪಾಯಿಜಾಲಾ ಜಿಲ್ಲೆಯಲ್ಲಿ ಒಟ್ಟು 12 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದ್ದು, 1170 ಕುಟುಂಬಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಪ್ರತಿಯೊಂದು ಕುಟುಂಬಕ್ಕೂ ತಕ್ಷಣಕ್ಕೆ ಐದು ಸಾವಿರ ರೂಪಾಯಿ ಚೆಕ್ ಅನ್ನು ಮುಖ್ಯಮಂತ್ರಿ ಹಸ್ತಾಂತರಿಸಿರುವುದಾಗಿ ವರದಿ ವಿವರಿಸಿದೆ.
ಆಲಿಕಲ್ಲು, ಬಿರುಗಾಳಿ ಬೀಸಿ ಹಾನಿಗೊಳಗಾದ ಬೈದ್ಯಾರ್ ದಿಘಿ, ಸೆಪಾಹಿಜಾಲಾ ಜಿಲ್ಲೆಗಳಿಗೆ ಇಂದು ಅಧಿಕಾರಿಗಳ ಜತೆ ಮುಖ್ಯಮಂತ್ರಿ ಭೇಟಿ ನೀಡಿದ್ದು, ಸ್ಥಳೀಯ ಜನರ ಜತೆ ಹಾನಿ ಬಗ್ಗೆ ವಿಚಾರಿಸಿರುವುದಾಗಿ ವರದಿ ತಿಳಿಸಿದೆ. ನಾವು ಪ್ರತಿಯೊಬ್ಬರಿಗೂ ನೆರವು ನೀಡಲು ಬದ್ಧರಾಗಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.