ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದು, ಕೆಲವು ಕಡೆ ಮರಗಳು ರಸ್ತೆಗುರುಳಿವೆ. ಮರಗೋಡು ಬಳಿಯ ಕಟ್ಟೆಮಾಡಿನಲ್ಲಿ ಹಸು ಮತ್ತು ಶಿರಂಗಾಲದಲ್ಲಿ 10 ಆಡುಗಳು ಸಿಡಿಲಿಗೆ ಬಲಿಯಾಗಿವೆ.
ಮಧ್ಯಾಹ್ನದ ವೇಳೆ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ನಾಪೋಕ್ಲು, ಸೋಮವಾರ ಪೇಟೆ, ಕುಶಾಲನಗರ, ಕೂಡಿಗೆ, ಸಿದ್ದಾಪುರ ಸೇರಿದಂತೆ ಮಡಿಕೇರಿ ತಾಲೂಕಿನ ಕೆಲವು ಭಾಗಗಳಲ್ಲಿ ಗಾಳಿ ಸಹಿತ ಸಾಧಾರಣ ಮಳೆ ಸುರಿಯುತ್ತಿದೆ. ಬುಧವಾರ ಮಧ್ಯಾಹ್ನ ಕುಶಾಲನಗರ ಸುತ್ತಮುತ್ತ ಆಲಿಕಲ್ಲು ಮಳೆಯಾಯಿತು.
ಪಾಲಿಟೆಕ್ನಿಕ್ ಕಾಲೇಜಿನ ಬಳಿ ಮರದ ದೊಡ್ಡ ಕೊಂಬೆ ರಸ್ತೆಗಡ್ಡ ಉರುಳಿ ಸ್ವಲ್ಪ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಕೂಡಿಗೆ ಭಾಗದಲ್ಲೂ ಭಾರೀ ಮಳೆಯಾಗಿದ್ದು, ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು. ಕಾವೇರಿ ನದಿ ಪಾತ್ರದ ನಾಪೋಕ್ಲು ಸುತ್ತಮುತ್ತಲ ಗ್ರಾಮೀಣ ಪ್ರದೇಶ ಮತ್ತು ಸಿದ್ದಾಪುರದಲ್ಲಿ ಉತ್ತಮ ಮಳೆಯಾಗಿದೆ.
ಹಸು ಬಲಿ
ಮಡಿಕೇರಿ ತಾಲೂಕಿನ ಮರಗೋಡು ಬಳಿಯ ಕಟ್ಟೆಮಾಡಿನ ಅಜ್ಜಂಡ ಉತ್ತಪ್ಪ ಅವರ ಹಸು ಸಿಡಿಲು ಬಡಿದು ಸಾವನ್ನಪ್ಪಿದೆ. ಸ್ಥಳಕ್ಕೆ ವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುಂಟಿಕೊಪ್ಪ ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಾಹ್ನ ಉತ್ತಮ ಮಳೆಯಾಗಿದ್ದು, ಸುಡುಬಿಸಿಲಿನ ವಾತಾವರಣಕ್ಕೆ ತಂಪೆರೆದಿದೆ.
ಪ್ರವಾಸಿಗರು ಪಾರು
ಮತ್ತೂಂದೆಡೆ ಜೋರಾದ ಗಾಳಿಯೊಂದಿಗೆ ಮಳೆಯಾದ ಪರಿಣಾಮ ಮರದ ಕೊಂಬೆಯೊಂದು ಬಿದ್ದರೂ ಭಾರೀ ಅನಾಹುತ ತಪ್ಪಿದ ಘಟನೆ ಕುಶಾಲನಗರದ ಪ್ರವಾಸಿತಾಣ ದುಬಾರೆಯಲ್ಲಿ ನಡೆದಿದೆ. ಮಳೆ ಬಂತೆಂದು ಮರದ ಕೆಳಗೆ ಆಶ್ರಯ ಪಡೆದಿದ್ದ ಪ್ರವಾಸಿಗರೊಬ್ಬರು ಅಪಾಯದಿಂದ ಪಾರಾಗಿದ್ದಾರೆ ಮತ್ತು ಅಲ್ಲೇ ನಿಂತಿದ್ದ ವಾಹನಗಳಿಗೂ ಯಾವುದೇ ಹಾನಿಯಾಗಿಲ್ಲ.