ಹುಣಸೂರು : ತಾಲೂಕಿನಲ್ಲಿ ವಾರದಿಂದ ದಿನಬಿಟ್ಟು ದಿನ ಬೀಳುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಹಲವೆಡೆ ಸಾಕಷ್ಟು ಹಾನಿಯುಂಟುಮಾಡಿರುವ ಬಗ್ಗೆ ವರದಿಯಾಗಿದೆ.
ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ, ಹರವೆಕಲ್ಲಹಳ್ಳಿ, ರಾಮೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬಾರೀ ಗಾತ್ರದ ಆಲಿಕಲ್ಲು ಮಳೆ ಸುರಿದು ಮನೆಗಳ ಮೇಲ್ಚಾವಣಿಯ ಹೆಂಚು, ಕಲ್ನಾರ್ ಶೀಟ್ ಹಾನಿಗೊಳಗಾಗಿದ್ದರೆ, ತಂಬಾಕು ಸಸಿಮಡಿ, ಮಾವಿನ ಫಸಲಿಗೆ ಅಪಾರ ನಷ್ಟ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಹಲವೆಡೆ ಬಾಳೆಬೆಳೆ ಹಾನಿ: ಉಯಿಗೊಂಡನಹಳ್ಳಿ, ಕುಟವಾಡಿ,ಕಾಡುವಡ್ಡರಗುಡಿ, ಉದ್ದೂರು, ಚಿಕ್ಕ ಹುಣಸೂರು, ಮಾಜಿ ಗುರುಪುರ ಸೇರಿದಂತೆ ಹಲವೆಡೆ ಬಿರುಗಾಳಿಯ ಬಿರುಸಿಗೆ ಫಲಕ್ಕೆ ಬಂದಿದ್ದ ನೂರಾರು ಎಕರೆ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ.
ಧರೆಗುರುಳಿದ ತೆಂಗಿನ ಮರಗಳು: ಕಟ್ಟೆಮಳಲವಾಡಿಯಲ್ಲಿ ಶಂಕರಯ್ಯರಿಗೆ ಸೇರಿದ ಫಸಲಿಗೆ ಬಂದಿದ್ದ 35 ತೆಂಗಿನ ಗಿಡಗಳು ಹಾಗೂ ನಾಗರಾಜ್‌ರಿಗೆ ಸೇರಿದ ಹತ್ತು ತೆಂಗಿನ ಮರಗಳು ನೆಲಕ್ಕಿದೆ. ಗ್ರಾಮದೊಳಗೆ ಮರವೊಂದು ಮನೆಮೇಲೆ ವಿದ್ಯುತ್ ತಂತಿ ಸಮೇತ ಬಿದ್ದು ಮೇಲ್ಚಾವಣಿ ಹಾನಿಯಾಗಿದ್ದರೆ, ಹೊಸವಾರಂಚಿ ಗ್ರಾಮದ ರಿಯಾನಾಬಾನು ಸೇರಿದಂತೆ ಕಟ್ಟೆಮಳಲವಾಡಿಯಲ್ಲಿ ಮೂರು ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಟ್ಟೆಮಳಲವಾಡಿಯಲ್ಲಿ ಬಿರುಗಾಳಿಗೆ ಧರೆಗುರುಳಿರುವ ತೆಂಗಿನ ಮರದ ಹಾನಿಯನ್ನು ಪರಿಶೀಲಿಸಿದರು.
ಇದನ್ನೂ ಓದಿ :1800 ವರ್ಷ ಇತಿಹಾಸವಿರುವ ನಾಗ ದೇವರಿಗೆ ಕೋಳಿ ಬಲಿಕೊಟ್ಟು ಪೂಜಿಸುತ್ತಾರಂತೆ ಗ್ರಾಮಸ್ಥರು…
ತಂತಿ ಮೇಲೆ ಬಿದ್ದ ತೆಂಗಿನ ಮರ: ಗುರುಪುರ ಬಳಿಯ ಸರ್ವೆ.ನಂ. 25ರಲ್ಲಿ ರಾಜಶೆಟ್ಟರಿಗೆ ಸೇರಿದ ತೆಂಗಿನಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದು, ಮೂರು ವಿದ್ಯುತ್ ಕಂಬಳಿಗೆ ಹಾನಿಯಾಗಿದೆ, ಇನ್ನು ಕಟ್ಟೆಮಳಲವಾಡಿ, ಉದ್ದೂರಿನಲ್ಲಿ ಗ್ರಾಮದೊಳಗಿನ ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಬಿದ್ದಿದ್ದು, ಮಳೆ ಇದ್ದಿದ್ದರಿಂದ ರಸ್ತೆಯಲ್ಲಿ ಓಡಾಟವಿಲ್ಲದೆ ಪ್ರಾಣ ಹಾನಿ ಸಂಭವಿಸಿಲ್ಲ. ಆಲಿಕಲ್ಲು ಮಳೆಯಿಂದಾಗಿ ತಂಬಾಕು ಸಸಿ ಮಡಿಗೆ ಬಾರೀ ಹಾನಿಯಾಗಿದ್ದು, ಕೊಳೆಯುವ ಭೀತಿ ಎದುರಾಗಿದೆ.
20 ಕಂಬಗಳಿಗೆ ಹಾನಿ : ತಾಲೂಕಿನಾದ್ಯಂತ ಬಿರುಗಾಳಿ ಮಳೆಗೆ 20 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಹಬ್ಬದ ಹಿನ್ನೆಲೆಯಲ್ಲಿ ಹಲವೆಡೆ ಈಗಾಗಲೆ ಹೊಸ ಕಂಬಗಳನ್ನು ಅಳವಡಿಸಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ ಕೆಲವೆಡೆ ತಂತಿ ಮೇಲೆ ಮರಗಳು ಬಿದ್ದು ಬಾಗಿದ್ದು, ಸೋಮವಾರ ಸರಿಪಡಿಸಲಾಗುವುದೆಂದು ಎಇಇ ಸಿದ್ದಪ್ಪ ತಿಳಿಸಿದ್ದಾರೆ.