Advertisement

ಬಿಜೆಪಿಯಿಂದ ಅಂಬೇಡ್ಕರ್‌ ಹೈಜಾಕ್‌ಗೆ ಯತ್ನ: ಪರಮೇಶ್ವರ್‌

11:26 AM Apr 15, 2017 | Team Udayavani |

ಬೆಂಗಳೂರು: ಸಾವಿರಾರು ವರ್ಷಗಳಿಂದ ತಳ ಸಮುದಾಯದ ಮೇಲೆ ನಡೆಯುತ್ತಿದ್ದ ಶೋಷಣೆಗಳಿಗೆ “ಸಂವಿಧಾನ’ದ ಮೂಲಕ ಮುಕ್ತಿ ದೊರಕಿಸಿಕೊಟ್ಟ ಶ್ರೇಯಸ್ಸು ಅಂಬೇಡ್ಕರ್‌ಗೆ ಸಲ್ಲಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಹೇಳಿದರು.

Advertisement

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಡಾ.ಬಿ.ಆರ್‌ ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಯಾವುದೇ ದೇಶದಲ್ಲಿ ಸ್ವತ್ತು ಹಾಗೂ ಅಧಿಕಾರ ಜೊತೆಗೂಡಿ ಶೋಷಣೆ ನಡೆಸುತ್ತವೆ.

ಈ ರೀತಿ ಸಹಸ್ರಾರು ವರ್ಷಗಳಿಂದ ಕೆಳವರ್ಗಗಳ ಮೇಲೆ ನಡೆಯುತ್ತಿದ್ದ ಶೋಷಣೆ ತಪ್ಪಿಸಲು ಅಂಬೇಡ್ಕರ್‌, ಸಂವಿಧಾನ ನೀಡುವ ಮೂಲಕ ದೊಡ್ಡ ಬದಲಾವಣೆಗೆ ಬುನಾದಿ ಹಾಕಿಕೊಟ್ಟಿದ್ದಾರೆ. ಮಹಾತ್ಮಾ ಗಾಂಧೀಜಿ ಸೇರಿದಂತೆ ಎಲ್ಲ ನಾಯಕರು ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಅದೇ ರೀತಿ
ಅಂಬೇಡ್ಕರ್‌, ಅತ್ಯುನ್ನತ ಸಂವಿಧಾನ ನೀಡಿ ಬದಲಾವಣೆಯ ಮೌನ ಕ್ರಾಂತಿಯನ್ನುಂಟು ಮಾಡಿದರು ಎಂದು ತಿಳಿಸಿದರು.

ಸಮುದಾಯಕ್ಕೆ ಸೀಮಿತವಾಗದಿರಲಿ:
ಅಂಬೇಡ್ಕರ್‌ ಅವರನ್ನು ದಲಿತರ ನಾಯಕ ಎಂದು ಸೀಮಿತಗೊಳಿಸುವ ಸಣ್ಣ ಮನಸ್ಥಿತಿ ದೂರವಾಗಬೇಕಿದೆ. ಅಂಬೇಡ್ಕರ್‌, ಮಹಿಳೆಯರು ಅಲ್ಪಸಂಖ್ಯಾತರು, ಎಲ್ಲ ವರ್ಗಗಳಿಗೂ ಸಮಾನತೆಯ ಸಂವಿಧಾನ ಕೊಟ್ಟಿದ್ದಾರೆ. ಕಾಂಗ್ರೆಸ್‌ ಎಂದಿಗೂ ಬಸವಣ್ಣ ಹಾಗೂ ಅಂಬೇಡ್ಕರ್‌ ತೋರಿಸಿದ ಸಮಾನತೆಯ ತತ್ವಗಳಿಗೆ ಪಕ್ಷ ಬದ್ಧವಾಗಿದೆ. ಹೀಗಾಗಿಯೇ ಕಾಂಗ್ರೆಸ್‌ಗೆ ಅಂಬೇಡ್ಕರ್‌ ಮೇಲೆ ಸಂಪೂರ್ಣ ಹಕ್ಕಿದೆ ಎಂದು ಹೇಳಿದರು.

ಅಂಬೇಡ್ಕರ್‌ ತತ್ವ ಸಿದ್ಧಾಂತಗಳನ್ನು ವಿರೋಧಿಸುತ್ತಿದ್ದ ಬಿಜೆಪಿಗೆ ಇತ್ತೀಚೆಗೆ ಅಂಬೇಡ್ಕರ್‌ ನೆನಪಾಗುತ್ತಿದ್ದಾರೆ. ಹೀಗಾಗಿ ಅವರನ್ನು ಹೈಜಾಕ್‌ ಮಾಡಿಕೊಳ್ಳಲು ಯತ್ನಿಸುತ್ತಿದೆ. ಮೊದಲು ಬಿಜೆಪಿ ಅಂಬೇಡ್ಕರ್‌ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸಲಿ ಎಂದು ಟೀಕಿಸಿದರು.

Advertisement

ದಲಿತರು ಮುಖ್ಯಮಂತ್ರಿಯಾಗಬೇಕು
ಇದೇ ವೇಳೆ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ವಿ ರಾಜಶೇಖರನ್‌, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸಿ ಅಂಬೇಡ್ಕರ್‌ ಕಂಡ ಸಮಾನತೆಯ ಕನಸು ನನಸಾಗಬೇಕಾದರೆ ರಾಷ್ಟ್ರಪತಿ, ಪ್ರಧಾನಮಂತ್ರಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ದಲಿತರಾಗಬೇಕು.ರಾಜ್ಯದ ಜನತೆಗೆ ಎಲ್ಲ ಭಾಗ್ಯಗಳನ್ನು ನೀಡಿದ ಸಿಎಂ ಸಿದ್ದರಾಮಯ್ಯ ದಲಿತ ಸಿಎಂ ಭಾಗ್ಯವನ್ನು ನೀಡಲು ಮನಸ್ಸು ಮಾಡಲಿ ಎಂದು ಹೇಳಿ ದರು.ರಾಜಶೇಖರನ್‌ ಮಾತಿಗೆ ಕಾರ್ಯಕರ್ತರು ಚಪ್ಪಾಳೆ ತಟ್ಟಿದರೆ, ಪಕ್ಕದಲ್ಲಿಯೇ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಮುಗುಳ್ನಗೆ ನಕ್ಕು ಸುಮ್ಮನಾದರು.

ಅಂಬೇಡ್ಕರ್‌ ದಲಿತ ಸಮುದಾಯಕ್ಕೆ ಮಾತ್ರ ಅನುಕೂಲ ಮಾಡಿಕೊಟ್ಟಿಲ್ಲ. ಎಲ್ಲ ಸಮುದಾಯದ ಒಳಿತಿಗೂ ಬದ್ಧವಾದ ಸಂವಿಧಾನ ನೀಡಿದ್ದಾರೆ. ಅಂಬೇಡ್ಕರ್‌ ಇಲ್ಲದಿದ್ದರೆ ಸೋಕಾಲ್ಡ್‌ ಮೇಲ್ವರ್ಗದ ಪಾಂಡಿತ್ಯ ಇಂದಿಗೂ ವಿಜೃಂಭಿಸುತ್ತಿತ್ತು. ಅಂತಹ ಅವಕಾಶವನ್ನು ತಪ್ಪಿಸಿದ ಮಹಾನ್‌ ಚೇತನ ಅಂಬೇಡ್ಕರ್‌ ಹೀಗಾಗಿಯೇ ಅಂಬೇಡ್ಕರ್‌ ನಿರಂತರ ಪರಿವರ್ತನೆ ಹಾದಿಯಾಗಿ ಕಾಣುತ್ತಾರೆ.
– ಪ್ರೊ. ಕೆ. ಇ ರಾಧಾಕೃಷ್ಣ, ಖ್ಯಾತ ಶಿಕ್ಷಣ ತಜ್ಞ 

Advertisement

Udayavani is now on Telegram. Click here to join our channel and stay updated with the latest news.

Next