Advertisement

ಬಾರದ ಮಳೆ: ಹಸಿರಾಗದ ಇಳೆ

10:27 AM Jul 24, 2019 | Naveen |

ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ:
ಕಳೆದ ವರ್ಷ ತುಂಗಾಭದ್ರಾ ನದಿ ತುಂಬಿದ್ದರಿಂದ ತಾಲೂಕಿನ ಹಿನ್ನೀರು ಪಾತ್ರದ ರೈತರು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಜುಲೈ ಕೊನೆ ವಾರವಾದರೂ ಹಿನ್ನೀರು ಬಹುದೂರವಿರುವುದರಿಂದ ಆತಂಕ ಹೆಚ್ಚಾಗಿದೆ.

Advertisement

ಈ ವರೆಗೂ ತಾಲೂಕಿನಲ್ಲಿ ಕೇವಲ 13262 ಹೆಕ್ಟೇರ್‌ ಬಿತ್ತನೆಯಾಗಿದ್ದು, ಕೃಷಿ ಇಲಾಖೆಯ 47 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಕಷ್ಟಕರವಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಮಾರಾಟ ಸಪ್ಪೆಯಾಗಿದೆ. ಖುಷ್ಕಿ ಭೂಮಿಯ ರೈತರು ರಾಗಿ, ನವಣೆ, ಶೇಂಗಾ, ತೊಗರಿ ಬಿತ್ತನೆ ಮಾಡಿ ವರುಣನ ಬರುವಿಕೆಗೆ ಮುಗಿಲತ್ತ ದೃಷ್ಟಿ ನೆಟ್ಟಿದ್ದಾರೆ. ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ನೀರಾವರಿ ಪ್ರದೇಶ ಜೊತೆಗೆ ಖುಷ್ಕಿ ಭೂಮಿಯ ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಮುಂಗಾರು ಮುನಿಸು:

ಜನವರಿಯಿಂದ ಜುಲೈ 20ರವರೆಗೆ ವಾಡಿಕೆ ಮಳೆ 223ಮಿಮೀ ಮಳೆ ಆಗಬೇಕಿತ್ತು. ಆದರೆ ಕೇವಲ 147 ಮಿಮೀ ಇಲ್ಲಿಯವರೆಗೂ ಮಳೆಯಾಗಿರುವುದು ದಾಖಲಾಗಿದೆ. ಒಟ್ಟು ಈವರೆಗೂ ಶೇ. 34ರಷ್ಟು ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದಾಗಿ ನೀರಾವರಿ ಭಾಗದ ರೈತರು ಭೂಮಿಗೆ ಬೀಜ ಹಾಕಲು ಹಿಂದೇಟು ಹಾಕುವಂತಾಗಿದ್ದು, ಒಣ ಬೇಸಾಯ ನೆಚ್ಚಿ ಕೊಂಡವರು ಹೊಲದತ್ತ ಮುಖಮಾಡದಾಗಿದ್ದಾರೆ.

ಹಿನ್ನೀರು ಭಾಗದ ಬನ್ನಿಗೋಳ, ಕಿತ್ನೂರು, ಸಿಗೇನಹಳ್ಳಿ ರೈತರು ಪ್ರತಿವರ್ಷ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆಗೆ ಮುಂದಾಗುತ್ತಿದ್ದರೂ ಈ ಬಾರಿ ಬೀಜದ ಹಣ ಗಂಟು ಮಾಡೋದು ಕಷ್ಟ ಎಂದು ಈರುಳ್ಳಿ ತಂಟೆಗೆ ಹೋಗದೆ ಹಿಂಗಾರು ಮಳೆಯಾದರೂ ಉತ್ತಮವಾಗಿ ಬರಲಿ ಎಂದು ಕಾದು ಕುಳಿತಿದ್ದಾರೆ. ಅಲ್ಲಲ್ಲಿ ಕೊಳವೆ ಬಾವಿ ನೆಚ್ಚಿಕೊಂಡು ಹತ್ತಿ ಬೆಳೆ ಹಾಕಿದವರು ನಷ್ಟದ ಆತಂಕ ಎದುರಿಸುವಂತಾಗಿದೆ. ಮಳೆ ಕೊರತೆಯಿಂದ ಹತ್ತಿ ಬೆಳೆ ಪ್ರಮಾಣ ಕ್ಷೀಣಿಸಿದ್ದು ಬೀಜ ಗೊಬ್ಬರದ ಹಣ ಹಿಂದಿರುಗಿದರೆ ಸಾಕು ಎನ್ನುತ್ತಿದ್ದಾರೆ. ಹಿಂದಿನ ವರ್ಷ ಜುಲೈ ತಿಂಗಳವರೆಗೆ 1192 ಕ್ವಿಂಟಲ್ ಮೆಕ್ಕೆಜೋಳ ಬೀಜ ಬಿತ್ತನೆ ಮಾಡಲಾಗಿತ್ತು. ಆದರೆ, ಈ ಬಾರಿ ಕೇವಲ 762 ಕ್ವಿಂಟಾಲ್ ಮೆಕ್ಕೆಜೋಳ ಬೀಜ ಮಾರಾಟವಾಗಿದ್ದು, ಕೆಲ ರೈತರು ಬೀಜವನ್ನು ಕೊಂಡೊಯ್ದು ಮಳೆ ನಿರೀಕ್ಷೆಯಲ್ಲಿದ್ದಾರೆ.

ರೈತರಿಗೆ ಮಾಹಿತಿ
ಮಳೆ ಕೊರತೆಯಿಂದ ಪರ್ಯಾಯ ಬೆಳೆಗಳಾದ ಉರುಳಿ, ನವಣೆ, ರಾಗಿ ಮೊರೆ ಹೋಗುವುದು ಸೂಕ್ತ. ಮೆಕ್ಕೆಜೋಳ ಬೆಳೆಗೆ ವಿಮೆ ಪಾವತಿಸಲು ಜು. 31ವರೆಗೆ ಅವಕಾಶವಿದೆ. ಪಾಲ್ ಆರ್ಮಿ ವಾರ್ಮ, ಕೆಮಿಕಲ್ ಸ್ಪ್ರೇ ತೆಗೆದುಕೊಂಡು ಇರುವ ಬೆಳೆ ಉಳಿಸಿಕೊಳ್ಳಲು ರೈತರಿಗೆ ಮಾರ್ಗದರ್ಶನ ನೀಡಲಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ರೈತಸಂಪರ್ಕ ಕೇಂದ್ರಗಳ ಎಒಗಳ ಮೂಲಕ ರೈತರಿಗೆ ಸಮರ್ಪಕ ಮಾಹಿತಿ ನೀಡಲಾಗುತ್ತಿದೆ.
ಜೀವನ್‌ಸಾಬ್‌,
ಕೃಷಿ ಸಹಾಯಕ ನಿರ್ದೇಶಕರು, ಹಗರಿಬೊಮ್ಮನಹಳ್ಳಿ
ಬಿತ್ತನೆ ತಂಟೆಗೆ ಹೋಗಿಲ್ಲ
ನೀರಾವರಿ ಇದೆ ಎಂದು ಹೊಲಕ್ಕೆ ಬೀಜ ಹಾಕಿದರೆ ನಷ್ಟ ಗ್ಯಾರಂಟಿ ಎಂಬಂತಾಗಿದೆ. ಮಳೆ ಇಲ್ಲದೆ ಇರುವುದರಿಂದ ನೀರು ಯಾವಾಗ ಹೋಗುತ್ತದೆ ಎಂಬುವ ಆತಂಕ ಇದೆ. ಅಂತರ್ಜಲ ಪ್ರಮಾಣ ಸಾಕಷ್ಟು ಕುಸಿದಿದೆ. ಹಾಗಾಗಿ ಬಿತ್ತನೆ ತಂಟೆಗೆ ಹೋಗಿಲ್ಲ. ಹಿಂದೆ ಮಳೆ ಪ್ರಾರಂಭವಾದರೆ ಹಳ್ಳ ಕೊಳ್ಳ ತುಂಬುತ್ತಿದ್ದವು. ಈಗಿನ ಮಳೆಗೆ ಒಂದು ಟವಲ್ ಪೂರ್ಣ ತೊಯ್ಯೋದು ಕಷ್ಟವಾಗಿದೆ. ಜನಜೀವನ ಜೊತೆಗೆ ದನಕರುಗಳನ್ನು ಸಾಕೋದು ತುಂಬಾ ತೊಂದರೆಯಾಗಿದೆ.
ಪೂಜಾರ್‌ ಜಯ ರಾಮೇಶ್ವರ ಬಂಡಿ ರೈತ
Advertisement
Advertisement

Udayavani is now on Telegram. Click here to join our channel and stay updated with the latest news.

Next