Advertisement

ಕಾಲುವೆ ನಿರ್ಮಾಣಕ್ಕೆ ಸಚಿವ ಪಿಟಿಪಿ ಅಡ್ಡಿ

03:04 PM Jun 26, 2019 | Naveen |

ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸುವ ಇಂಟೆಕ್‌ ಕಾಲುವೆ ನಿರ್ಮಾಣದ ಕಾಮಗಾರಿ ಹೂವಿನಹಡಗಲಿ ಕ್ಷೇತ್ರದ ರಾಜವಾಳ ಬಳಿ ಇರುವುದರಿಂದ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಭೀಮಾನಾಯ್ಕ ಆರೋಪಿಸಿದರು.

Advertisement

ಪಟ್ಟಣದ ಹಗರಿ ಆಂಜನೇಯಸ್ವಾಮಿ ದೇವಸ್ಥಾನದ ಮುಂಬಾಗ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮಾಲವಿ ಜಲಾಶಯದ ಕಾಮಗಾರಿ ಪ್ರಗತಿ ಕುರಿತಂತೆ ಶಾಸಕರ ಸ್ಪಷ್ಟನೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದ ರೈತಾಪಿ ವರ್ಗಕ್ಕೆ ಮೋಸ ಮಾಡುವವನು ನಾನಲ್ಲ, ಮಾಲವಿ ಜಲಾಶಯಕ್ಕೆ ನೀರು ತರುವುದು ಸತ್ಯ. ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸಲು ಒಟ್ಟು 19 ಕಿ.ಮೀನಷ್ಟು ಕಾಮಗಾರಿ ಮುಂದುವರಿದಿದೆ. ಈಗಾಗಲೇ ಅಗತ್ಯ ಪ್ರಮಾಣದ ಬೃಹತ್‌ ಪೈಪ್‌ಗ್ಳು ಪೂರೈಕೆಯಾಗಿದೆ. ಒಟ್ಟು 17 ಕಿಮೀನಷ್ಟು ಪೈಪ್‌ ಜೋಡಿಸುವ ಕಾರ್ಯ ಪೂರ್ಣಗೊಂಡಿದೆ. ಆದರೆ, ಹೂವಿನಹಡಗಲಿಯ ರಾಜವಾಳ ಬಳಿ ಇಂಟೆಕ್‌ ಚಾನೆಲ್ ನಿರ್ಮಿಸಲು ಪರೋಕ್ಷವಾಗಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅಡ್ಡಿಪಡಿಸುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲವಿ ಜಲಾಶಯಕ್ಕೆ 162 ಕೋಟಿ ರೂ. ಅನುದಾನ ಒದಗಿಸಿ, ಕಾಮಗಾರಿಗೆ ಚಾಲನೆ ನೀಡಿರುವುದನ್ನು ವಿರೋಧಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ವಿರೋಧಿಗಳಿಗೆ ಅಭಿವೃದ್ಧಿ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕನ್ನು ಮುಂದುವರಿದ ತಾಲೂಕಾಗಿ ಪರಿಗಣಿಸಿ ಬೆಳೆ ನಷ್ಟ ಪರಿಹಾರ ನೀಡಲು ನಿರಾಕರಿಸುವುದು ಅವೈಜ್ಞಾನಿಕವಾಗಿದೆ. ತಕ್ಷಣವೇ ಬೆಳೆ ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಕಂದಾಯ ಸಚಿವರ ಗಮನ ಸೆಳೆಯಲಾಗಿದೆ. ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದ್ದಾರೆ. ಕ್ಷೇತ್ರದ ಕೊಟ್ಟೂರು ಸೇರಿ 12 ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ಈಗಾಗಲೇ ಡಿಪಿಆರ್‌ ಸಿದ್ಧತೆಗೆ ಒಟ್ಟು 35 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿ, ಕ್ಷೇತ್ರದ ಮಹತ್ವಕಾಂಕ್ಷಿ ಯೋಜನೆ ಮಾಲವಿ ಜಲಾಶಯದ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರೋದಗಿಸಿ. ಇಲ್ಲಿವರೆಗಿನ ರಾಜಕಾರಣಿಗಳು ಕೇವಲ ಸುಳ್ಳು ಭರವಸೆಯಲ್ಲಿಯೇ ಕಾಲಹರಣ ಮಾಡಿದ್ದಾರೆ. ಹೀಗೆ ಮುಂದುವರಿಯುವುದು ಬೇಡ. ರೈತರಿಗೆ ಬೆಳೆನಷ್ಟ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಿ. ಇಲ್ಲವಾದಲ್ಲಿ ಹೋರಾಟಕ್ಕಿಳಿಬೇಕಾಗುತ್ತದೆ ಎಂದು ಎಚ್ಚರಿಸಿದರು. ಸರ್ಕಾರಕ್ಕೆ ಬೆಳೆನಷ್ಟವಾಗಿದೆ ಎಂಬುದಕ್ಕೆ ಪೂರಕ ಮಾಹಿತಿ ಒದಗಿಸಿ ಕೂಡಲೇ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ಗೋಣಿಬಸಪ್ಪ, ಸಿದ್ದನಗೌಡ, ಎಂ.ಎಲ್.ಕೆ.ನಾಯ್ಡು, ಉಜ್ಜಿನಯ್ಯ, ಕಕ್ಕುಪ್ಪಿ ಬಸವರಾಜ ಮಾತನಾಡಿದರು. ಮುಖಂಡರಾದ ಬುಡ್ಡಿ ಬಸವರಾಜ, ಎನ್‌.ಎಂ. ಗೌಸ್‌, ದೇವರಾಜ, ಹಂಚಿನಮನಿ ಹನುಮಂತಪ್ಪ, ವಿ.ಬಸವರಾಜ, ಏಣಿಗಿ ಮಾಬುಸಾಬು, ನೀಲಿ ರಾಜಾಸಾಬ್‌, ರುದ್ರಮುನಿ ಸ್ವಾಮಿ, ಮಲ್ಲಿಕಾರ್ಜುನ, ಮಹೇಶಪ್ಪ, ಮೃತ್ಯುಂಜಯ ರಾಜಾಸಾಬ್‌, ಲೋಕಪ್ಪ, ಬಸವರಾಜಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next