ಹಗರಿಬೊಮ್ಮನಹಳ್ಳಿ: ದೇಶದಲ್ಲಿ 2040ರ ವರೆಗಿನ ದೃಷ್ಟಿಕೋನವನ್ನು ಹೇಳಬೇಕಾಗಿರುವ ಹೊಸ ಶಿಕ್ಷಣ ನೀತಿಯು ಕೇವಲ ಭರವಸೆಗಳ ಗೂಡಾಗಿದ್ದು, ವಾಸ್ತವ ಅಂಶಗಳನ್ನು ನಿರ್ಲಕ್ಷಿಸಿದೆ ಎಂದು ಟೀಚರ್ ಪತ್ರಿಕೆಯ ಸಂಪಾದಕ ರಾಮಕೃಷ್ಣ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಭಾನುವಾರ ಸಂಘಟಿಸಿದ್ದ ನೂತನ ಶಿಕ್ಷಣ ನೀತಿ 2019ರ ಕರಡಿನಲ್ಲಿನ ಅಂತರಾಳದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೂತನ ಶಿಕ್ಷಣ ನೀತಿಯ ಬಗ್ಗೆ ಇನ್ನಷ್ಟು ವ್ಯಾಪಕ ಚರ್ಚೆಯಾಗಬೇಕಾದ ಅಗತ್ಯವಿದೆ. ಅದಕ್ಕೆ ಇನ್ನೂ ಮೂರು ತಿಂಗಳ ಕಾಲ ಅಂತಿಮ ಗಡುವನ್ನು ವಿಸ್ತರಿಸಬೇಕು. ಸ್ವಾತಂತ್ರ್ಯ ನಂತರದ ಎಲ್ಲಾ ಶಿಕ್ಷಣ ನೀತಿಗಳ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳ ಸಿಂಹಾವಲೋಕನ ಮಾಡದೆ ಕೇವಲ ಏಕಮುಖವಾಗಿದೆ. ವಿಜ್ಞಾನಿಗಳ ಬದಲಾಗಿ ಶಿಕ್ಷಣ ತಜ್ಞರೊಬ್ಬರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರೆ ನೀತಿ ನಿರೂಪಣೆಗೆ ಇನ್ನೂ ಅರ್ಥ ಬರುತ್ತಿತ್ತು. ಸರ್ಕಾರಿ ಶಾಲಾ ವ್ಯವಸ್ಥೆ ಬಲಪಡಿಸಲು ಬೇಕಾದ ಹಣಕಾಸಿನ ನೆರವಿನ ಬಗ್ಗೆ ಎಲ್ಲಿಯೂ ಪ್ರಸ್ತಾಪವೇ ಇಲ್ಲ ಎಂದರು.
ಕಾನೂನು ಬಾಹಿರವಾದ ಕಡಿಮೆ ವೆಚ್ಚದ ಬಂಡವಾಳ ಹೂಡಿಕೆಯ ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು ಬಡವರಿಗೆ ಶಿಕ್ಷಣ ಗಗನ ಕುಸುಮವಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ನಮ್ಮ ಸಂವಿಧಾನದ ಆಶಯದಲ್ಲಿ ಶಿಕ್ಷಣ ಖಾಸಗೀಕರಣಕ್ಕೆ ಒಳಗಾಗಬಾರದು ಮತ್ತು ಕಾರ್ಪೊರೇಟ್‌ಗಳ ಕೈಯಲ್ಲಿ ಹೋಗಬಾರದು ಎಂಬ ಬಹುದೊಡ್ಡ ಆಶಯವಿದೆ. ಆದರೆ ಅದಕ್ಕೆ ಇದರಲ್ಲಿ ಯಾವುದೇ ಬೆಂಬಲ ಇಲ್ಲದಿರುವುದು ವಿಷಾದನೀಯ. ಶಿಕ್ಷಣ ಕ್ಷೇತ್ರ ವಿಕೇಂದ್ರೀಕರಣ ಅನ್ನಿಸಿದರೂ ಕೂಡ ಅದು ಕೇಂದ್ರೀಕರಣದತ್ತ ಒತ್ತು ಕೊಡುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಶಿಕ್ಷಣ ಪರ ಮನಸ್ಸುಗಳು ಒಂದುಗೂಡಿ ಇದರಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕಿದೆ ಎಂದರು.
ಡಯಟ್‌ನ ಹಿರಿಯ ಉಪನ್ಯಾಸಕ ತಾಲೂಕು ನೋಡಲ್ ಅಧಿಕಾರಿ ಬಸವರಾಜ ಉದ್ಘಾಟಿಸಿದರು. ಬಿಜಿವಿಎಸ್‌ನ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದಂತಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಬಿಜಿವಿಎಸ್ ವತಿಯಿಂದ ಮಾಡಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ಬೋರಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯಂಕಾರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೊಟ್ರಪ್ಪ, ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಂಘದ ವಿ ನಾಗೇಂದ್ರಪ್ಪ, ನೌಕರರ ಒಕ್ಕೂಟದ ಮಂಜುಳಾ ಹವಲ್ದಾರ್, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗೋಣಿಬಸಪ್ಪ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಮಾರುತಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಯು. ಓಬಯ್ಯ, ಶಿಕ್ಷಕರ ಸಂಘದ ಶಿವಲಿಂಗಸ್ವಾಮಿ, ಉಮೇಶ್ ಜೆಜ್ಜೂರಿ, ಐ.ಈರಣ್ಣ, ವೀರನಗೌಡ, ಪಂಚಪ್ಪ, ಪ್ರವೀಣ್ ಉಪಸ್ಥಿತರಿದ್ದರು.
ಜೆ.ಎಂ.ರಮೇಶ್, ಪರಮೇಶ್ವರಯ್ಯ ಸೊಪ್ಪಿಮಠ, ಕೊಟ್ರೇಶ್ ಸಾವಳಗಿ, ರಂಗನಾಥ ಹವಲ್ದಾರ್, ಕೆ.ರಾಮಣ್ಣ ನಿರೂಪಿಸಿದರು.