Advertisement

ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ

11:42 AM Jun 03, 2019 | Naveen |

ಹಗರಿಬೊಮ್ಮನಹಳ್ಳಿ: ಮಾಹಿತಿ ತಂತ್ರಜ್ಞಾನವನ್ನು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು.

Advertisement

ಪಟ್ಟಣದ ಪಂಚಮಸಾಲಿ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ನಿಮ್ಮ ಪ್ರಯತ್ನಕ್ಕೆ ಪೂರಕವಾಗಿ ಸ್ಪಂದಿಸಿದ ತಂದೆ, ತಾಯಿಯರನ್ನು ಕೊನೆಯವರೆಗೂ ಉತ್ತಮವಾಗಿ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳಿಂದ ದೂರ ಉಳಿದಾಗ ಮಾತ್ರ ಹೆಚ್ಚು ಅಂಕಗಳಿಕೆ ಸಾಧ್ಯ. ಹೊಸಪೇಟೆಯಿಂದ ಪಟ್ಟಣದ ಮಾರ್ಗವಾಗಿ ಕೊಟ್ಟೂರಿಗೆ ರೈಲು ಸಂಚಾರ ಆರಂಭಿಸುವ ಕುರಿತು ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ್‌ ಅಂಗಡಿಯವರ ಬಳಿ ನಿಯೋಗ ತೆರಳಲಾಗುವುದು. ವರ್ಷದೊಳಗೆ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವಂತೆ ಮಠಾಧಿಧೀಶರು ಮತ್ತು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗದೊಂದಿಗೆ ಸಚಿವರ ಗಮನ ಸೆಳೆಯಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತಂತೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

ಪಂಚಮಸಾಲಿ ಸಮಾಜದ ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ದೇಶದ ಯೋಗ ಪದ್ಧತಿ ವಿಶ್ವದ ಎಲ್ಲೆಡೆಯೂ ಮಾನ್ಯತೆ ಪಡೆದಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚಾಕಚಕ್ಯತೆಯಿಂದ ಉತ್ತಮ ಸಾಮರ್ಥ್ಯ ಸಾಬೀತುಪಡಿಸಬಹುದು ಎಂದರು.

ಸಮಾಜದ ಹರಿಹರ ಪೀಠದಲ್ಲಿ ಜೂ.21ರಿಂದ ವಿಶ್ವ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 15 ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಸಮಾಜದಿಂದ ಒಟ್ಟು 25,057 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಮೂಲಕ ಇತರರಿಗೂ ಪ್ರೇರಣೆ ಶಕ್ತಿಯಾಗುವ ಕಾರ್ಯ ಸಮಾಜ ನಿರ್ವಹಿಸಿದೆ ಎಂದರು.

ಸಮಾಜದ ಶಾಖಾಮಠದ ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನಸಿ ಸಿದ್ದೇಶ್‌, ಮಾಜಿ ಶಾಸಕ ನೇಮರಾಜ ನಾಯ್ಕ, ಸಮಾಜದ ರಾಜ್ಯ ಗೌರವಾಧ್ಯಕ್ಷ ಭಾವಿ ಬೆಟ್ಟಪ್ಪ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್‌ ಮಾತನಾಡಿದರು. ಇದೇ ವೇಳೆ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪತ್ರಿಕೋದ್ಯಮದಲ್ಲಿ ರ್‍ಯಾಂಕ್‌ ಪಡೆದ ಪಂಚಮಸಾಲಿ ಸಮಾಜದ ಹತ್ತಿ ಪ್ರಶಾಂತರನ್ನು ಸನ್ಮಾನಿಸಲಾಯಿತು. ಹರಪನಹಳ್ಳಿ ಜಿ.ಪಂ.ಸದಸ್ಯೆ ಸುಶೀಲಮ್ಮ ದೇವೇಂದ್ರಪ್ಪ, ಅಕ್ಕಿ ತೋಟೇಶ್‌, ಕಲ್ಲೇಶ್‌ ಇಟಿಗಿ, ಮಂಜುನಾಥ ಗೌಡ, ಕೊಟ್ರೇಶ್‌ ಶೆಟ್ಟರ್‌, ಎಂ.ಜಿ.ರವಿ, ಕೆ.ರವಿ, ಮಂಗಳಾ ಬಸವರಾಜ, ಉಮಾ ಬಸವರಾಜ, ಅಕ್ಕಮಹಾದೇವಿ ಜೀವನಗೌಡ, ಪುರಸಭೆ ಸದಸ್ಯರಾದ ಹುಡೇದ್‌ ಗುರುಬಸವರಾಜ, ಬದಾಮಿ ಮೃತ್ಯುಂಜಯ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next