Advertisement

ಚಿತ್ತಾ ಮಳೆಗೆ ಅಪಾರ ಹಾನಿ

01:18 PM Oct 24, 2019 | |

ಹಗರಿಬೊಮ್ಮನಹಳ್ಳಿ: ತಾಲೂಕಿನ ಅಡವಿ ಆನಂದೇವನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ 20 ಎಕರೆಗೂ ಹೆಚ್ಚು ಭತ್ತ ಬೆಳೆ ಹಾನಿಯಾಗಿದೆ. ಕಟಾವಿನ ಹಂತಕ್ಕೆ ಬಂದಿರುವ ಭತ್ತ ಬೆಳೆ ನೆಲಕ್ಕಪ್ಪಳಿಸಿರುವುದರಿಂದ ಭತ್ತ ಬೆಳೆಗಾರರು ನಷ್ಟಕ್ಕೆ ತುತ್ತಾಗುವಂತಾಗಿದೆ.

Advertisement

ಬಿದ್ದ ಭತ್ತವನ್ನು ರೈತರು ಕಟ್ಟಿಸುವುದಕ್ಕೆ ಮುಂದಾಗಿದ್ದು ಮಳೆರಾಯನನ್ನು ಶಪಿಸುತ್ತಿದ್ದಾರೆ. ಈಗಾಗಲೇ ಭತ್ತ ಬೆಳೆಗೆ ಹೆಚ್ಚು ಖುರ್ಚು ಮಾಡಿರುವ ರೈತರು ಆತಂಕಕ್ಕೊಳಗಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹತ್ತಿ ಅಡಿವೆಪ್ಪ ನಷ್ಟಕ್ಕೊಳಗಾದ ಭತ್ತದ ಹೊಲಗಳಿಗೆ ಭೇಟಿ ನೀಡಿ ಸರಕಾರದಿಂದ ಪರಿಹಾರ ಕೊಡಿಸಬೇಕು. ಮಳೆಗೆ ನಷ್ಟವಾದ ಇತರೆ ಬೆಳೆಗಳಿಗೆ ಕೂಡ ವೈಜ್ಞಾನಿಕ ಪರಿಹಾರ ನೀಡಬೇಕು. ತಾಲೂಕಿನ ಬನ್ನಿಗೋಳ, ತಂಬ್ರಹಳ್ಳಿ ಭಾಗಗಳಲ್ಲಿ ಈರುಳ್ಳಿ ಬೆಳೆ ಕಟಾವಿಗೆ ಬಂದಿದ್ದು, ಅತಿಯಾದ ಮಳೆಯಿಂದ ಒಕ್ಕಣೆ ಕಷ್ಟದಾಯಕವಾಗಿದೆ. ಈರುಳ್ಳಿ ನೆಲದಲ್ಲಿ ಕೊಳೆತು ಹೋಗುತ್ತಿದ್ದು ಬೆಳೆಗಾರರು ನಷ್ಟಕ್ಕೆ ತುತ್ತಾಗುತ್ತಿರುವುದನ್ನು ತೋಟಗಾರಿಕೆ ಇಲಾಖೆ ಅದಿಕಾರಿಗಳು ಖುದ್ದಾಗಿ ರೈತರ ಹೊಲಗಳಿಗೆ ಭೇಟಿನೀಡಿ ಪರಿಶೀಲಿಸಬೇಕು.

ಕಳೆದ ಐದಾರು ವರ್ಷಗಳಿಂದ ಮಳೆಯಿಲ್ಲದೆ ಬರಗಾಲದ ಹೊಡೆತಕ್ಕೆ ತತ್ತರಿಸಿದ ರೈತರಿಗೆ ಈಬಾರಿ ಅತಿವೃಷ್ಟಿಯಿಂದ ಬೆಳೆಗಳನ್ನು ಒಕ್ಕಣಿಕೆ ಮಾಡಿಕೊಳ್ಳಲಾಗದೆ ನಷ್ಟಕ್ಕೆ ತುತ್ತಾಗುವಂತಾಗಿದೆ. ಮಳೆಗಳು ಉತ್ತಮವಾಗಿ ಫಸಲು ಕೈಸೇರುವ ಭರವಸೆಯಲ್ಲಿದ್ದ ರೈತರಿಗೆ ವರುಣರಾಯ ಹೆಚ್ಚು ಸುರಿಯುವುದರ ಮೂಲಕ ರೈತರ ಆಸೆಗಳಿಗೆ ತಣ್ಣೀರೆರಚಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಮಾಲವಿ ಗ್ರಾಮದಲ್ಲಿಯೂ ಕೂಡ ಭತ್ತದ ಬೆಳೆಗಳು ನೆಲಕ್ಕುರುಳಿದ್ದು ರೈತರು ನಷ್ಟದ ಬೀತಿಯಲ್ಲಿದ್ದಾರೆ. ರಾಜ್ಯ ರೈತ ಸಂಘದ ಉಪಾಧ್ಯಕ್ಷ ಉಪ್ಪಾರ ಸಕ್ರಪ್ಪ, ಕಾರ್ಯಾಧ್ಯಕ್ಷ ರಮೇಶ್‌ ಪೂಜಾರ್‌, ಸಂಘದ ಹನುಮಂತಪ್ಪ, ಮುತುRರು ಲೋಕಪ್ಪ ಇದ್ದರು.

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ 1.56. ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟ ಹಿನ್ನೆಲೆ ಕಂಪ್ಲಿ-ಕೋಟೆ ಸೇತುವೆ(ಎರಡನೇ ದಿನವು) ಮುಳುಗಡೆಯಾಗಿದ್ದು, ಸೇತುವೆ ಮೇಲೆ ಸುಮಾರು 5 ಅಡಿಗಳಷ್ಟು ನೀರು ಹರಿಯುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಕಳೆದೆರಡು ಬಾರಿ ಪ್ರವಾಹ ಬಂದಾಗಲೂ ಕಂಪ್ಲಿ ತಾಲ್ಲೂಕಿನಲ್ಲಿ ಮಳೆ ಇರಲಿಲ್ಲ,ಆದರೆ ಈ ಭಾರಿ ಪ್ರವಾಹದ ಜೊತೆಗೆ ಮಳೆಯೂ ಸುರಿದಿದ್ದು ಜನಜೀವನ ಅಸ್ಯವ್ಯಸ್ತವಾಗಿದೆ.

Advertisement

ಕಂಪ್ಲಿ-ಕೋಟೆ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಕಂಪ್ಲಿ-ಕೋಟೆ, ಬೆಳಗೋಡ್‌ ಹಾಳ್‌, ಸಣಾಪುರ, ಇಟಗಿ, ನಂ.2 ಮುದ್ದಾಪುರ ಗ್ರಾಮದ ನದಿ ಪಾತ್ರದಲ್ಲಿರುವ ಭತ್ತ ಸೇರಿದಂತೆ ವಿವಿಧ ಬೆಳೆಗಳು ಜಲಬಂಧಿಯಾಗಿವೆ.

ಸಂಚಾರಕ್ಕೆ ಬ್ರೇಕ್‌: ಎರಡನೇ ದಿನವೂ ನದಿ ಪ್ರವಾಹ ಮುಂದುವರೆದ ಹಿನ್ನೆಲೆ ಕಂಪ್ಲಿ-ಕೋಟೆ ಸೇತುವೆ ನೀರಿನಲ್ಲಿ ಮುಳುಗಿದ ಪರಿಣಾಮ ಪಾದಚಾರಿ ಹಾಗೂ ವಾಹನ ಸವಾರರ ಓಡಾಟಕ್ಕೆ ತುಂಬ ತೊಂದರೆ ಉಂಟಾಗಿದೆ.

ಬುಧವಾರ ಸಂಜೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆ ಸುರಿದ ಪರಿಣಾಮ ಮತ್ತೇ ನದಿ ನೀರು ಹೆಚ್ಚಾಗುವ ಆತಂಕ ಜನರಲ್ಲಿ ಕಾಡತೊಡಗಿದೆ. ಕಂಪ್ಲಿ ಭಾಗದಲ್ಲಿ ಕಾರ್ಮೋಡ ಕವಿದಿದ್ದು, ಉತ್ತಮ ಮಳೆ ಸುರಿದಿದೆ. ಮಳೆಯಿಂದಾಗಿ ಜನರು ಹೊರಗಡೆ ಬರಲು ಹಿಂದೇಟು ಹಾಕಿದರು. ಮಳೆ, ನದಿ ಪ್ರವಾಹದಿಂದ ಮತ್ತಷ್ಟು ಸಂಕಷ್ಟ ಎದುರಾಗುವ ಮುನ್ಸೂಚನೆ ಜನರಲ್ಲಿ ಕಾಡತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next