Advertisement

ವಿದ್ಯುತ್‌ ಕಂಬಗಳನ್ನು ತೆರವು ಮಾಡಿ

11:26 AM Aug 18, 2019 | Naveen |

ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ, ಕಡಲಬಾಳು, ಬ್ಯಾಸಿಗಿದೇರಿ ಸೇರಿ ವಿವಿಧೆಡೆ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿರುವ ವಿದ್ಯುತ್‌ ಕಂಬಗಳ ತೆರವಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಇಒ ಬಿ.ಮಲ್ಲಾನಾಯ್ಕ ತಿಳಿಸಿದರು.

Advertisement

ಪಟ್ಟಣದ ತಾಪಂ ಕೆಡಿಪಿ ಸಭೆಯಲ್ಲಿ ಅವರು ಶನಿವಾರ ಮಾತನಾಡಿದರು. ಹಂಪಾಪಟ್ಟಣದಲ್ಲಿರುವ ಕಬ್ಬಿಣದ ಕಂಬವನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಪಿಡಿಒ ಜಗದೀಶ್ವರಯ್ಯ ತಿಳಿಸಿದರು. ಗ್ರಾಪಂಗಳಲ್ಲಿ ಬೀದಿದೀಪ ಅಳವಡಿಕೆಗೆ ಹೆಚ್ಚುವರಿ ಲೈನ್‌ ಎಳೆಯಲು ಸಾಮಗ್ರಿಗಳನ್ನು ಹೊಸಪೇಟೆಯಿಂದ ರವಾನಿಸಬೇಕಿದೆ. ಈಗಾಗಲೇ ಶಾಸಕರು ಕಚೇರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಶೀಘ್ರದಲ್ಲೇ ಉಗ್ರಾಣ ನಿರ್ಮಾಣವಾಗಲಿದ್ದು ಸಮಸ್ಯೆ ಪರಿಹಾರವಾಗಲಿದೆ ಎಂದು ಜೆಸ್ಕಾಂ ಶಾಖಾಧಿಕಾರಿ ರಾಘವೇಂದ್ರ ಪ್ರತಿಕ್ರಿಯಿಸಿದರು.

ಪಟ್ಟಣದ ಸರಕಾರಿ 100 ಹಾಸಿಗೆ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 130 ಹೆರಿಗೆ ಸೇರಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಮಾಸಿಕ 250ಕ್ಕೂ ಹೆಚ್ಚು ಹೆರಿಗೆಯಾಗುತ್ತಿವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಸುಲೋಚನಾ ತಿಳಿಸಿದರು.

ಸರಕಾರದ ಆದೇಶದಂತೆ ಮೆಟ್ರಿಕ್‌ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇ.25ರಷ್ಟು ಹಿಂದುಳಿದ ವರ್ಗಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ ಹಾಸ್ಟೆಲ್ಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದೆ. ಇಲಾಖೆಯಿಂದ 4 ಕಾನೂನು ಪದವೀಧರರಿಗೆ ಪ್ರತಿ ತಿಂಗಳು 10ಸಾವಿರ ಶಿಷ್ಯವೇತನ ಮತ್ತು ಕಚೇರಿ ಸ್ಥಾಪನೆಗೆ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು. ದೇವದಾಸಿಯರ ಮಕ್ಕಳನ್ನು ಮದುವೆಯಾಗುವುವರಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ| ದಿನೇಶ್‌ ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವಗಿರಿ ಮಾತನಾಡಿ, ತಾಲೂಕಿನಲ್ಲಿ 100 ಕುರಿಸಾಕಾಣಿಕೆಗೆ ತಲಾ 10ಸಾವಿರ ರೂ. ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದರು. ಕೊಳವೆ ಬಾವಿಗಳ ಅಗತ್ಯತೆ ಕುರಿತು ಜಿಲ್ಲಾಧಿಕಾರಿಗೆ ಪತ್ರ ಸಲ್ಲಿಸಿ ಎಂದು ಇಒ ಮಲ್ಲನಾಯ್ಕ ಕುಡಿಯುವ ನೀರು ಸರಬರಾಜು ಇಲಾಖೆಯ ಎಇ ದೀಪಾಗೆ ತಿಳಿಸಿದರು.

Advertisement

ಪಟ್ಟಣದಲ್ಲಿ 2 ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡ ಹಾಗೂ ತೆಲುಗೋಳಿ ಗ್ರಾಮದ ವಸತಿ ನಿಲಯ ಪೂರ್ಣಗೊಂಡಿದ್ದು ಸೆ. 18ರಂದು ಶಾಸಕರು ಉದ್ಘಾಟಿಸಲಿದ್ದಾರೆ ಎಂದು ಬಿಸಿಎಂ ಇಲಾಖೆ ಉಪನಿರ್ದೇಶಕ ಕೊಟ್ರೇಶ್‌ ನಾಯ್ಕ ತಿಳಿಸಿದರು. ರೇಷ್ಮೆ ಶೆಡ್‌ ನಿರ್ಮಾಣಕ್ಕೆ ಪ್ರತಿ ಚದುರ ಅಡಿಗಳಿಗೆ 100ರೂ ನೀಡಲಾಗುವುದು. ರೈತರಿಗೆ 3ಲಕ್ಷರೂ.ರೇಷ್ಮೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದ್ದು, ಗುಡಿಸಲು ಬದಲಾಗಿ ಕಟ್ಟಡ ನಿರ್ಮಿಸಿಕೊಳ್ಳುವುದು ಹೆಚ್ಚು ಸೂಕ್ತ ಎಂದು ರೇಷ್ಮೆ ವಿಸ್ತರಣಾಧಿಕಾರಿ ಲಂಕೆಪ್ಪ ತಿಳಿಸಿದರು. ಈ ಸಾಲಿನಲ್ಲಿ 157 ಮೆಟ್ರಿಕ್‌ ಟನ್‌ ಗುರಿ ಹೊಂದಲಾಗಿದೆ. ತಿಂಗಳ ಅಂತ್ಯಕ್ಕೆ 104ಟನ್‌ ಉತ್ಪಾದನೆ ಮಾಡಲಾಗಿದೆ. ಈ ಬಾರಿ ಜಿ.ಪಂ.ಯಿಂದ ಎಕರೆಗೆ 37.5ಸಾವಿರ ರೂ. ಮತ್ತು ಎಸ್ಸಿಎಸ್ಟಿಗೆ 40ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಕೈಗಾರಿಕೆ ಇಲಾಖೆಯಿಂದ ಪ್ರತಿ ಜಿ.ಪಂ.ಕ್ಷೇತ್ರದ 10 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿ ಸೌಮ್ಯ ತಿಳಿಸಿದರು. ಜನನಿ ಸುರಕ್ಷಾ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾದರೆ 500 ರೂ.ಮೊತ್ತ ನೀಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ| ಸುಲೋಚನಾ ತಿಳಿಸಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಕೊಚಾಲಿ ಸುಶೀಲ ಮಂಜುನಾಥ, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು. ಗುರುಬಸವರಾಜ, ಉಮೇಶಗೌಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next