ಬೇರೆಯವರಿಂದ ಅನ್ಯಾಯವಾಗಿ, ಒತ್ತಾಯ ಮಾಡಿ ಸುಲಿಗೆ, ವಸೂಲಿ ಮಾಡುವ ದಂಧೆಗೆ “ಹಫ್ತಾ’ ಎನ್ನುತ್ತಾರೆಂಬುದು ಎಲ್ಲರಿಗೂ ಗೊತ್ತು. ಈಗ ಇದೇ ಪದ ಬಳಕೆ ಮಾಡಿ ಇಲ್ಲೊಂದು ಹೊಸಬರ ತಂಡ ತಮ್ಮ ಚಿತ್ರಕ್ಕೆ “ಹಫ್ತಾ’ ಎಂಬ ಹೆಸರಿಟ್ಟುಕೊಂಡು ಚಿತ್ರ ಮಾಡಿದೆ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರೂ ಹೊಸಬರೇ. ಇನ್ನು, ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ “ಹಫ್ತಾ’ ಚಿತ್ರದ ಶೀರ್ಷಿಕೆಗೆ “ಸೆಂಟಿಮೆಂಟ್ ನಾಟ್ ಅಲೋಡ್’ ಎಂಬ ಅಡಿಬರಹವಿದೆ.
ಇಂಥದ್ದೊಂದು ಚಿತ್ರಕ್ಕೆ ಶ್ರೀಮುರಳಿ ಸಾಥ್ ಕೊಟ್ಟಿದ್ದಾರೆ. ಶ್ರೀಮುರಳಿ ಚಿತ್ರದ ಟೀಸರ್ ಬಿಡುಗಡೆಗೊಳಿಸಿದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ “ಹಫ್ತಾ’ ಎಂಬ ಹೆಸರಿದೆ. ಅಲ್ಲಿಗೆ ಚಿತ್ರದ ತುಂಬೆಲ್ಲಾ ಸುಲಿಗೆ, ವಸೂಲಿ, ದಗಲ್‌ಬಾಜಿ ಇನ್ನೂ ಅನೇಕ ಅಂಶಗಳೇ ತುಂಬಿರುತ್ತವೆ ಎಂದು ಭಾವಿಸಿದರೆ, ಆ ಊಹೆ ತಪ್ಪು.
“ಹಫ್ತಾ’ ಅಂತಿದ್ದರೂ, ಇದರಲ್ಲಿ ಯಾವುದೇ ಸುಲಿಗೆ, ವಸೂಲಿ ಕಥೆ ಇಲ್ಲ ಎಂಬ ಸ್ಪಷ್ಟನೆ ಕೊಡುತ್ತದೆ ಚಿತ್ರತಂಡ. ಕಡಲ ತೀರದ ಭೂಗತಲೋಕದ ಚಟುವಟಿಕೆಗಳು ಮತ್ತು ಸುಪಾರಿ ಕಿಲ್ಲಿಂಗ್ ಅಂಶಗಳೇ ಈ ಚಿತ್ರದ ಕಥಾ ವಸ್ತುವಾಗಿದ್ದು, ಸೆಸ್ಪನ್ಸ್- ಥ್ರಿಲ್ಲರ್ ಶೈಲಿಯಲ್ಲಿ ಚಿತ್ರ ತೆರೆಮೇಲೆ ಬರುತ್ತಿದೆ. “ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕು’ ಎಂಬುದು ಚಿತ್ರದ ಕಥೆಯ ಒಂದು ಎಳೆ ಎನ್ನುತ್ತದೆ ಚಿತ್ರತಂಡ.
ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟನಾಗಿ, ಖಳನಟನಾಗಿ ಅಭಿನಯಿಸಿರುವ ವರ್ಧನ್ ತೀರ್ಥಹಳ್ಳಿ ಮೊದಲ ಬಾರಿಗೆ ಈ ಚಿತ್ರದಲ್ಲಿ ನಾಯಕ ನಟನಾಗಿ ಎರಡು ಶೇಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಘವ ನಾಗ್, ಬಿಂಬಶ್ರೀ ನೀನಾಸಂ, ಸೌಮ್ಯ, ಬಾಲ ರಾಜವಾಡಿ, ದಶಾವರ ಚಂದ್ರು, ಉಗ್ರಂ ರವಿ ಮುಂತಾದವರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಜಯ್ ಸಂಗೀತ, ಗೌತಂ ಶ್ರೀವತ್ಸ ಹಿನ್ನಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸಿನಿಟೆಕ್ ಸೂರಿ ಛಾಯಾಗ್ರಹಣ, ರಘುನಾಥ್.ಎಲ್ ಸಂಕಲನ ಕಾರ್ಯವಿದೆ. ಪ್ರಕಾಶ್ ಹೆಬ್ಟಾಳ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮಂಜುನಾಥ್ ನಿರ್ಮಾಣ ಮಾಡಿದ್ದು, ಇಷ್ಟರಲ್ಲೇ ಚಿತ್ರದ ಆಡಿಯೋ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.