Advertisement

‘ಹಫೀಜ್‌, ಮಸೂದ್‌ಗೆ ಉಗ್ರ ಪಟ್ಟ ಕಟ್ಟಲು ಆದ್ಯತೆ’

12:50 AM Jul 27, 2019 | Team Udayavani |

ಹೊಸದಿಲ್ಲಿ: ಅಕ್ರಮ ಚಟುವಟಿಕೆ ತಡೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಲಭ್ಯವಾಗಿದ್ದು, ರಾಜ್ಯಸಭೆಯಲ್ಲೂ ಅನುಮೋದನೆಗೊಂಡು ಕಾನೂನಾಗಿ ಜಾರಿಗೆ ಬರುತ್ತಿದ್ದಂತೆಯೇ ಮೊದಲು ಉಗ್ರ ಹಫೀಜ್‌ ಸಯೀದ್‌ ಮತ್ತು ಮಸೂದ್‌ ಅಜರ್‌ನನ್ನು ಉಗ್ರ ಎಂದು ಘೋಷಿಸಲಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

Advertisement

ಸದ್ಯ ಈ ಕಾಯ್ದೆಯಡಿ ಸಂಘಟನೆಗಳನ್ನು ಮಾತ್ರ ಉಗ್ರ ಸಂಘಟನೆ ಎಂದು ಘೋಷಿಸಬಹುದಾಗಿದ್ದು, ಯಾವುದೇ ವ್ಯಕ್ತಿಯನ್ನು ಉಗ್ರನೆಂದು ಘೋಷಿಸಲು ಅವಕಾಶವಿರಲಿಲ್ಲ. ಈ ಸಂಬಂಧ ಈಗ ತಿದ್ದುಪಡಿ ಮಾಡಲಾಗಿದ್ದು, ಇನ್ನು ಮುಂದೆ ವ್ಯಕ್ತಿಯನ್ನೂ ಉಗ್ರ ಎಂದು ಘೋಷಿಸುವ ಅವಕಾಶವಿದೆ. ವಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಈ ಮಸೂದೆಕ್ಕೆ ಅನುಮೋದನೆ ಲಭ್ಯವಾಗಿದೆ. ಪುಲ್ವಾಮಾ ದಾಳಿಯ ಸಂಚುಕೋರ ಮಸೂದ್‌ ಅಜರ್‌ ಮತ್ತು ಮುಂಬಯಿ ದಾಳಿ ಸಂಚುಕೋರ ಹಫೀಜ್‌ ಸಯೀದ್‌ನನ್ನು ಮೊದಲಿಗೆ ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಇದರಿಂದ ದೇಶದಲ್ಲಿ ಇವರ ಓಡಾಟಕ್ಕೆ ನಿಷೇಧ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ಈ ಕಾಯ್ದೆಯು ವಿಶ್ವಸಂಸ್ಥೆಯ ನಿಲುವಳಿಗೆ ಅನುಗುಣವಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಕಂಪೆನಿ ಕಾಯ್ದೆಗೆ ತಿದ್ದುಪಡಿ: ಇದೇ ವೇಳೆ, ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುವ ಮತ್ತು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ (ಎನ್‌ಸಿಎಲ್ಟಿ)ದ ಹೊರೆ ಕಡಿಮೆಗೊಳಿಸುವಂಥ ಪ್ರಸ್ತಾಪವಿರುವ ಕಂಪೆನಿಗಳ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಕ್ಕೆ ಲೋಕಸಭೆಯಲ್ಲಿ ಶುಕ್ರವಾರ ಅಂಗೀಕಾರ ದೊರೆತಿದೆ. ಈ ನಡುವೆ, ದೇಶದ ಇತರೆ ಭಾಗಗಳಲ್ಲೂ ಬುಲೆಟ್ ರೈಲು ಜಾಲ ಸ್ಥಾಪಿಸುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ರೈಲ್ವೇ ಖಾತೆ ಸಹಾಯಕ ಸಚಿವ ಸುರೇಶ್‌ ಅಂಗಡಿ ತಿಳಿಸಿದ್ದಾರೆ.

1 ಕೋಟಿ ಮರಗಳು ಧರೆಗೆ: ಅಭಿವೃದ್ಧಿ ಕಾರ್ಯಗಳಿಗಾಗಿ ಕಳೆದ 5 ವರ್ಷಗಳಲ್ಲಿ 1 ಕೋಟಿ ಮರಗಳನ್ನು ಕಡಿಯಲು ಪರಿಸರ ಸಚಿವಾಲಯ ಅನುಮತಿ ಕೊಟ್ಟಿದೆ ಎಂದು ಸರಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿತು.

ಮತ ಕುರಿತು ಭಿನ್ನಮತ: ದೇಶದಲ್ಲಿ ಮತದಾನ ಮಾಡುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಲೋಕಸಭೆ ಸದಸ್ಯರಲ್ಲೇ ಭಿನ್ನಾಭಿಪ್ರಾಯ ಮೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next