ಹೊಸದಿಲ್ಲಿ : ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರ ಜಾಲಗಳನ್ನು ನಿರ್ನಾಮ ಮಾಡುವ ಭರವಸೆಗೆ ತಕ್ಕಂತೆ ನಡೆದುಕೊಳ್ಳದ ಕಾರಣಕ್ಕೆ ಪಾಕಿಸ್ಥಾನಕ್ಕೆ ಅಮೆರಿಕ 25.50 ಕೋಟಿ ಡಾಲರ್‌ಗಳ ಮಿಲಿಟರಿ ನೆರವನ್ನು ತಡೆ ಹಿಡಿದಿರುವ ಹಿನ್ನೆಲೆಯಲ್ಲಿ 2008ರ ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ನಿಷೇದಿತ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಭಾರತದ ವಿರುದ್ಧ ಮತ್ತೆ ಕೆಂಡ ಕಾರಲು ಆರಂಭಿಸಿದ್ದಾನೆ.
ಪಾಕಿಸ್ಥಾಕ್ಕೆ ಅಮೆರಿಕ ಮಿಲಿಟರಿ ನೆರವನ್ನು ತಡೆ ಹಿಡಿದಿರುವ ಹಿಂದೆ ಭಾರತ ಇದೆ ಎಂದಾತ ನೇರವಾಗಿ ಖಂಡಿಸಿದ್ದಾನೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧ ಪಟ್ಟಿಯಲ್ಲಿರುವ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ಮುಂಚೂಣಿ ಸಂಸ್ಥೆಯಾಗಿರುವ ನಿಷೇಧಿತ ಜಮಾತ್ ಉದ್ ದಾವಾ ವಂತಿಗೆ ಸ್ವೀಕರಿಸುವುದನ್ನು ನಿಷೇಧಿಸಿ ಪಾಕಿಸ್ಥಾನದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ಅಧಿಸೂಚನೆ ಹೊರಡಿಸಿದ ಒಂದು ದಿನದ ತರುವಾಯ, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಭಾರತದ ವಿರುದ್ಧ ಕಿಡಿ ಕಾರಲು ಆರಂಭಿಸಿ ತೀವ್ರ ವಾಕ್‌ದಾಳಿ ನಡೆಸತೊಡಗಿದ್ದಾನೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಕಟಿಸಿರುವ ನಿಷೇಧಿತ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಅಲ್ ಕಾಯಿದಾ, ತೆಹರೀಕ್ ಎ ತಾಲಿಬಾನ್ ಪಾಕಿಸ್ಥಾನ್, ಲಷ್ಕರ್ ಎ ಝಾಂಗ್‌ವಿ, ಜೆಯುಡಿ, ಎಫ್ ಐ ಎಫ್, ಎಲ್ ಇ ಟಿ ಮತ್ತು ಇತರ ಸಂಘಟನೆಗಳು ಹಾಗೂ ವ್ಯಕ್ತಿಗಳ ಹೆಸರು ಸೇರಿವೆ.
ಕಳೆದ ಹದಿನೈದು ವರ್ಷಗಳಲ್ಲಿ ಅಮೆರಿಕ ಪಾಕಿಸ್ಥಾನಕ್ಕೆ ಉಗ್ರರನ್ನು ಮಟ್ಟ ಹಾಕುವ ಉದ್ದೇಶಕ್ಕಾಗಿ 33 ಬಿಲಿಯ ಡಾಲರ್‌ಗಳನ್ನು “ಮೂರ್ಖತನ’ದಿಂದ ಪಾಕಿಸ್ಥಾನಕ್ಕೆ ನೀಡಿದೆ; ಇದಕ್ಕೆ ಪ್ರತಿಯಾಗಿ ಪಾಕಿಸ್ಥಾನ ಅಮೆರಿಕಕ್ಕೆ ಕೊಟ್ಟಿರುವುದು ದೊಡ್ಡ ಸೊನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಪಾಕಿಸ್ಥಾನಕ್ಕೆ ನೇರವಾಗಿ ಕೊಟ್ಟಿರುವ ತಪರಾಕಿ ಎಂದೇ ತಿಳಿಯಲಾಗಿದೆ.