ಹೊಸದಿಲ್ಲಿ: ಉಗ್ರ ಸಂಘಟನೆಗಳಿಗೆ ಸ್ವಯಂಸೇವಾ ಸಂಸ್ಥೆಗಳ ಮೂಲಕ ಹಣಕಾಸು ಒದಗಿಸಿದ ಆರೋಪದಲ್ಲಿ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖಂಡ ಹಾಗೂ ಮುಂಬಯಿ ದಾಳಿಯ ಸಂಚುಕೋರ ಹಫೀಜ್ ಸಯೀದ್ ವಿರುದ್ಧ ಪಾಕಿಸ್ಥಾನ 20ಕ್ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, ಈತನನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಹೇಳಲಾಗಿದೆ.
ಪಂಜಾಬ್ ಪ್ರಾಂತ್ಯದ ಭಯೋತ್ಪಾದನೆ ನಿಗ್ರಹ ದಳವು ಹಫೀಜ್ ಸಹಿತ 13 ವ್ಯಕ್ತಿಗಳ ವಿರುದ್ಧ 23 ಪ್ರಕರಣಗಳನ್ನು ಬುಧವಾರ ದಾಖಲಿಸಿಕೊಂಡಿತ್ತು. ಈ ಬಗ್ಗೆ ಮಾತನಾಡಿದ ಪಂಜಾಬ್ ಪ್ರಾಂತ್ಯದ ಪೊಲೀಸರು, ಕೆಲವು ಸಹಚರರನ್ನು ಬಂಧಿಸಲಾಗಿದೆ. ಆದರೆ ಎಫ್ಐಆರ್‌ನಲ್ಲಿ ಉಲ್ಲೇಖೀಸಲಾದ ವ್ಯಕ್ತಿಗಳನ್ನು ಬಂಧಿಸಿಲ್ಲ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದಿದ್ದಾರೆ.
ಕಣ್ಣೊರೆಸುವ ತಂತ್ರ: ಇದು ಅಂತಾರಾಷ್ಟ್ರೀಯ ಸಮುದಾಯದ ಕಣ್ಣೊರೆಸುವ ತಂತ್ರ ಎಂದು ಭಾರತ ಆರೋಪಿಸಿದೆ. ಪಾಕಿಸ್ಥಾನದ ಇಂಥ ಕಣ್ಣೊರೆಸುವ ತಂತ್ರಗಳಿಂದ ನಾವು ಮೂರ್ಖರಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಕೆಲವೇ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಹಣಕಾಸು ವಿಚಕ್ಷಣಾ ದಳ (ಎಫ್ಎಟಿಎಫ್) ಪಾಕಿಸ್ಥಾನವನ್ನು ತರಾಟೆಗೆ ತೆಗೆದುಕೊಂಡು, ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಆಕ್ಷೇಪಿಸಿತ್ತು. ಅಷ್ಟೇ ಅಲ್ಲ, ಅಕ್ಟೋಬರ್ ಒಳಗೆ ಕ್ರಮ ಕೈಗೊಳ್ಳದಿದ್ದರೆ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದೂ ಅದು ಎಚ್ಚರಿಕೆ ನೀಡಿತ್ತು. ಹೀಗಾಗಿ ತರಾತುರಿಯಲ್ಲಿ ಪಾಕಿಸ್ಥಾನ ಇವರ ವಿರುದ್ಧ ದೂರು ದಾಖಲಿಸಿಕೊಂಡಿದೆ.
ದಾವೂದ್ ನಮ್ಮಲ್ಲಿಲ್ಲ:ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ಥಾನದಲ್ಲಿದ್ದಾನೆ ಎಂದು ಇಂಗ್ಲೆಂಡ್‌ನ ನ್ಯಾಯಾಲಯಕ್ಕೆ ಅಮೆರಿಕ ತಿಳಿಸಿದ ಬಳಿಕ, ದಾವೂದ್ ನಮ್ಮಲ್ಲಿಲ್ಲ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ.