Advertisement

ಮುಚ್ಚುವ ಆತಂಕದಲ್ಲಿ ಹಾಡಿಕಲ್ಲು ಸರಕಾರಿ ಶಾಲೆ

03:00 AM Jun 26, 2018 | Karthik A |

ಸುಬ್ರಹ್ಮಣ್ಯ: ಪೂರ್ಣ ನಾಗರಿಕತೆಗೆ ಇನ್ನೂ ತೆರೆದುಕೊಂಡಿಲ್ಲದ ಊರಿದು. ಇಂದಿಗೂ ಕಾಲ್ನಡಿಗೆ ಇಲ್ಲವೆ ಖಾಸಗಿ ವಾಹನಗಳ ಮೂಲಕವೇ ಓಡಾಡುತ್ತಿರುವ ಗ್ರಾಮಸ್ಥರು. ಇತ್ತೀಚೆಗಷ್ಟೆ ಈ ಊರಿಗೆ ಶಂಕಿತ ನಕ್ಸಲರು ಬಂದಿದ್ದರು. ಇಲ್ಲಿನ ಸರಕಾರಿ ಶಾಲೆಯಲ್ಲಿ ಎರಡು ತರಗತಿಗಳಲ್ಲಿ ಮಕ್ಕಳೇ ಇಲ್ಲ. ಭವಿಷ್ಯದಲ್ಲಿ ಈ ಶಾಲೆ ಮುಚ್ಚುವ ಭೀತಿ ಎದುರಿಸುತ್ತಿದೆ. ಹಾಡಿಕಲ್ಲು ಊರಿನ ಹೆಸರು ಕೆಲ ದಿನಗಳಿಂದ ಸಾರ್ವಜನಿಕ ವಲಯದಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಇದಕ್ಕೆ ಕಾರಣ ಈ ಊರಿಗೆ ಇತ್ತೀಚೆಗಷ್ಟೆ ಮೂವರು ಶಂಕಿತ ನಕ್ಸಲರು ಬಂದಿದ್ದರು. ಅಂತಹ ಊರಿನಲ್ಲಿ ಶಿಕ್ಷಣ ಒದಗಿಸುವ ಸ.ಹಿ.ಪ್ರಾ. ಶಾಲೆ ಮುಚ್ಚುವ ಸ್ಥಿತಿಯಲ್ಲಿದೆ.

Advertisement

ಗೊಂಡಾರಣ್ಯದ ನಡುವಿರುವ ಹಾಡಿಕಲ್ಲಿನಲ್ಲಿ 1978ರಲ್ಲಿ ಸ.ಕಿ.ಪ್ರಾ. ಶಾಲೆ ನಿರ್ಮಾಣಗೊಂಡಿತ್ತು. ಸ್ಥಳೀಯ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಿತ್ತು. ರಸ್ತೆ, ವಾಹನ ವ್ಯವಸ್ಥೆ ಇಲ್ಲದೆ ಇರುವಾಗ ಕಾಲ ಬುಡದಲ್ಲೇ ಪ್ರಾಥಮಿಕ ಶಿಕ್ಷಣ ದೊರೆಯಲು ಈ ಶಾಲೆ ಅವಕಾಶ ಮಾಡಿಕೊಟ್ಟಿತ್ತು. ಇಲ್ಲಿ ಕಲಿತ ಮಕ್ಕಳು ಹೆಚ್ಚಿನ ಶಿಕ್ಷಣವನ್ನು ಬೇರೆಡೆ ಪಡೆಯಲು ಅನುಕೂಲ ಮಾಡಿಕೊಟ್ಟಿತ್ತು.

ಒಂದರಿಂದ ಐದನೇ ತರಗತಿ ತನಕ ಇರುವ ಈ ಸರಕಾರಿ ಶಾಲೆಯಲ್ಲಿ ಇರುವ ಒಟ್ಟು ಮಕ್ಕಳ ಸಂಖ್ಯೆ 6 ಮಾತ್ರ. ಕಳೆದ ವರ್ಷ ಮತ್ತು ಈ ವರ್ಷ ಶಾಲೆಗೆ ಹೊಸದಾಗಿ ಮಕ್ಕಳು ದಾಖಲಾಗಿಲ್ಲ. ಶಾಲೆಯ ಒಂದು ಮತ್ತು ಎರಡನೇ ತರಗತಿಯಲ್ಲಿ ಮಕ್ಕಳೇ ಇಲ್ಲ. ಮೂರನೇ ತರಗತಿಯಲ್ಲಿ ಇಬ್ಬರು, ನಾಲ್ಕನೇ ತರಗತಿಯಲ್ಲಿ ಮೂವರು ಹಾಗೂ ಐದನೇ ತರಗತಿಯಲ್ಲಿ ಓರ್ವ ವಿದ್ಯಾರ್ಥಿ ಮಾತ್ರ ಓದುತ್ತಿದ್ದಾರೆ. ಶಾಲೆಯಲ್ಲಿ ನೀರು, ಸುಸಜ್ಜಿತ ಕಟ್ಟಡ ಇದೆ. ಆಟದ ಮೈದಾನ ಇದೆ. ಕೊಠಡಿಗಳು ತರಗತಿಗೆ ತಕ್ಕಂತೆ ಇಲ್ಲ. ಒಂದೇ ಹಾಲ್‌ ನಲ್ಲಿ ಎರಡು ಕೊಠಡಿ ಮಾಡಿಕೊಂಡು ಒಂದರಲ್ಲಿ ನಲಿಕಲಿ ತರಗತಿಯ ಮೂಲಕ ಮೊದಲ ಮೂರು ತರಗತಿಗಳನ್ನು ಹಾಗೂ ಇನ್ನೊಂದು ಕೊಠಡಿಯಲ್ಲಿ ಮತ್ತೆರಡು ತರಗತಿಗಳನ್ನು ಒಟ್ಟಿಗೆ ನಡೆಸಲಾಗುತ್ತಿದೆ.

ಆಟಕ್ಕೂ ಪಾಠಕ್ಕೂ ಇವರೇ
ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಶಾಲೆಯ ಎಲ್ಲ ಚಟುವಟಿಕೆಯನ್ನು ಈ ಶಿಕ್ಷಕರೇ ನಿರ್ವಹಿಸಬೇಕು. ಸ್ವಚ್ಛತೆ, ಅಟೆಂಡರ್‌ ಎಲ್ಲ ಕಾರ್ಯಗಳನ್ನು ಇವರೇ ಮಾಡಬೇಕು. ಪಾಠಕ್ಕೂ ಇವರೇ ಶಿಕ್ಷಕರು, ಆಟಕ್ಕೂ ಇವರೇ ತರಬೇತುದಾರರು. ಮಕ್ಕಳ ಮತ್ತು ಶಾಲೆಯ ಇತರೆ ಎಲ್ಲ ಚಟುವಟಿಕೆಗಳ ಹೊಣೆಗಾರಿಕೆಯನ್ನೂ ತಲೆ ಮೇಲೆ ಹೊತ್ತುಕೊಳ್ಳಬೇಕು. ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ಇದ್ದು, ಒಬ್ಬರು ಮಹಿಳಾ ಸಿಬಂದಿ ಅಡುಗೆ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಇರುವ ಓರ್ವ ಶಿಕ್ಷಕ ಇಲಾಖೆ ಸಭೆಗಳಿಗೆ ತೆರಳುವ ವೇಳೆ ಮಕ್ಕಳಿಗೆ ರಜೆ ಘೋಷಿಸಬೇಕಷ್ಟೇ.

‘ಇಲ್ಲ’ಗಳ ಸವಾಲು
ತಾಲೂಕು ಕೇಂದ್ರದಿಂದ ದೂರದಲ್ಲಿ ಕಾಡಿನ ತಪ್ಪಲಿನಲ್ಲಿ ಇರುವ ಊರಿನಲ್ಲಿ ಈ ಶಾಲೆ ಇದೆ. ಇಲ್ಲಿಗೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಸಂಪರ್ಕ ಸೇತುವೆಗಳಿಲ್ಲ. ವಿದ್ಯುತ್‌, ದೂರವಾಣಿ, ಮೊಬೈಲ್‌ ಯಾವ ವ್ಯವಸ್ಥೆಗಳೂ ಇಲ್ಲ. ನೆಟ್‌ ವರ್ಕ್‌ ಸಿಗಬೇಕಿದ್ದರೆ ಗುಡ್ಡ ಹತ್ತಬೇಕು ಇಲ್ಲವೇ ಐದು ಮೈಲು ದೂರ ನಡೆದು ಸಿಗ್ನಲ್‌ ಇರುವಲ್ಲಿಗೆ ಬರಬೇಕು. ಇಂತಹ ಸ್ಥಳದಲ್ಲಿ ಇರುವ ಶಾಲೆ ಇಲ್ಲಿಯವರಿಗೆ ಆಪದ್ಭಂಧವ. ಪ. ಜಾತಿ, ಪ. ಪಂಗಡ ಸಹಿತ ಇತರೆ ವರ್ಗದವರು ಇಲ್ಲಿದ್ದಾರೆ.

Advertisement

ಸುದೀರ್ಘ‌ ಅವಧಿ ತೆರೆದಿದ್ದ ಈ ಶಾಲೆಗೆ ಇತ್ತೀಚಿನ ವರ್ಷಗಳಿಂದ ಮಕ್ಕಳ ಕೊರತೆ ಇದೆ. ಎರಡು ವರ್ಷಗಳಿಂದ ಮಕ್ಕಳು ಶಾಲೆಗೆ ದಾಖಲಾಗದೆ ಇರುವುದು ಶಾಲೆ ಮುಚ್ಚುವ ಮುನ್ಸೂಚನೆ ನೀಡಿದೆ. ಈಗ ಇರುವ ಮಕ್ಕಳ ಕಲಿಕೆ ಮೂರು ವರ್ಷದಲ್ಲಿ ಪೂರ್ಣಗೊಂಡ ಬಳಿಕ ಮಕ್ಕಳಿಲ್ಲದೆ ಶಾಲೆ ಮುಚ್ಚುವ ಹಂತಕ್ಕೆ ತಲುಪಲಿದೆ. ಈ ಸರಕಾರಿ ಶಾಲೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಇಲ್ಲಿಯ ನಾಗರಿಕರನ್ನು ಕಾಡುತ್ತಿದೆ.

ಶಿಕ್ಷಕರಿಗೆ ಭಯ
ಇಲ್ಲಿ ಕರ್ತವ್ಯದಲ್ಲಿ ಇರುವ ಶಿಕ್ಷಕ ಮಡಪ್ಪಾಡಿಯಲ್ಲಿ ವಾಸವಿದ್ದಾರೆ. ಅಲ್ಲಿಂದ ಶಾಲೆಗೆ 6 ಕಿ.ಮೀ. ದೂರ. ಯಾವುದೇ ಸರಕಾರಿ ವಾಹನ ವ್ಯವಸ್ಥೆ ಇಲ್ಲ. ಕಾಡಿನ ಮಧ್ಯೆ ಹಾದುಹೋಗುವ ಕಚ್ಚಾ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅವರು ಸಂಚರಿಸುತ್ತಾರೆ. ಕಳೆದ ಎರಡೂವರೆ ವರ್ಷಗಳ ವೃತ್ತಿ ಅವಧಿಯಲ್ಲಿ ಅನೇಕ ಬಾರಿ ಕಾಡಾನೆ ಸಹಿತ ವನ್ಯಜೀವಿಗಳು ಎದುರಾಗಿ ಭಯ ಹುಟ್ಟಿಸಿವೆ ಎನ್ನುತ್ತಾರೆ ಚಿಕ್ಕಮಗಳೂರು ಮೂಲದ ಶಿಕ್ಷಕ ಪ್ರಸಾದ್‌ ನಾ¿åಕ್‌ ಅವರು.

ಸಭೆ ನಡೆಸುತ್ತೇವೆ
ಶಾಲೆಯಲ್ಲಿ  ಮಕ್ಕಳ ಕೊರತೆ ಇರುವುದು ದೊಡ್ಡ  ಸವಾಲಾಗಿದೆ. ನೂರಾರು ಮಕ್ಕಳ ಭವಿಷ್ಯ ರೂಪಿಸಿದ ಈ ಸರಕಾರಿ ಶಾಲೆಯನ್ನು ಉಳಿಸಿಕೊಳ್ಳುವುದು ನಮಗೆ ಅನಿವಾರ್ಯ. ಊರಿನವರು ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. 
– ದಮಯಂತಿ ಮುಂಡೋಡಿ ಶಾಲಾ SDMC ಅಧ್ಯಕ್ಷರು

— ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next