ಹೂವಿನಹಡಗಲಿ: ಪಟ್ಟಣದಲ್ಲಿ ಪುರಸಭೆ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರತೊಡಗಿದೆ. ಪುರಸಭೆಯ ವಿವಿಧ ವಾರ್ಡ್‌ಗಳಲ್ಲಿ ಚುನಾವಣೆ ಕಣಕ್ಕಿಳಿ ಯಲು ಆಕಾಂಕ್ಷಿಗಳು ತಯಾರಿ ನಡೆಸಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಆಗಲೇ ಮತ್ತೂಂದು ಚುನಾವಣೆ ಎದುರಿಸಲು ಕ್ಷೇತ್ರದಲ್ಲಿನ ಎಲ್ಲಾ ಪಕ್ಷದ ನಾಯಕರು ಸಜ್ಜುಗೊಳ್ಳಬೇಕಾಗಿದೆ.
ಇತ್ತ ಆಡಳಿತ ರೂಢ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡೆ ಟಿಕೆಟ್ಗಾಗಿ ಪಕ್ಷದ ನಾಯಕರ ಮೇಲೆ ಲಾಬಿ ನಡೆಸಲು ಬಲಾಬಲ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಎರಡನೇ ಹಂತದ ನಾಯಕರು ಈಗಾಗಲೇ ವಾರ್ಡ್‌ಗಳಲ್ಲಿ ಸಂಚರಿಸಿ ಪಕ್ಷವು ತಮಗೆ ವಹಿಸಿದ್ದ ಆಕಾಂಕ್ಷಿಗಳಿಂದ ಅರ್ಜಿ ಪಡೆಯಲು ಮುಂದಾಗಿದ್ದು, ಪ್ರತಿಯೊಂದು ವಾರ್ಡ್‌ಗಳಲ್ಲಿಯೂ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಕನಿಷ್ಠ 8-10 ಆರ್ಜಿ ಪಕ್ಷದ ಮುಖಂಡರಿಗೆ ನೀಡಲಾಗಿದೆ. ಇದರಿಂದಾಗಿ ಯಾವ ಆಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಅಭ್ಯರ್ಥಿ ಆಯ್ಕೆಗೆ ಯಾವ ಮಾನ ದಂಡ ನಿಗದಿ ಮಾಡಬೇಕು ಎನ್ನುವುದು ಪಕ್ಷದ ಮುಖಂಡರಿಗೆ ಸವಾಲಾಗಿದೆ.
ಇನ್ನು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಿ ಟಿಕೆಟ್ ಪಡೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಕಳೆದ ಪುರಸಭೆ ಅವಧಿಯಲ್ಲಿ ಸದಸ್ಯರಾಗಿದ್ದವರು ಕೆಲವರು ಪುನಃ ಎರಡನೇ ಬಾರಿಗೆ ಸ್ಪರ್ಧೆ ಬಯಸಿ ಆರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ಪಕ್ಷವು ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವ ನಿರ್ಣಯ ಕೈಗೊಳ್ಳುತ್ತದೆಯೋ ಕಾದು ನೋಡಬೇಕಾಗಿದೆ.