Advertisement

ಹಾಡಿ, ದಲಿತ ಕೇರಿಗಳಲ್ಲಿ ಅಕ್ರಮ ಕೃತ್ಯಕ್ಕೆ ತಡೆ

12:22 PM Jul 10, 2018 | Team Udayavani |

ಹುಣಸೂರು: ಮೀಟರ್‌ ಬಡ್ಡಿ, ಅಕ್ರಮ ಮದ್ಯ, ಇಸ್ಪೀಟ್‌ ದಂಧೆ ನಡೆಸುವ ಹಾಗೂ ಹಾಡಿಗಳಲ್ಲಿ ಗಿರಿಜನರ ಜಮೀನನ್ನು ಪರಭಾರೆಗೆ ಸಹಕಾರ ನೀಡುವ ಮಧ್ಯವರ್ತಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಎಚ್ಚರಿಕೆ ನೀಡಿದರು.

Advertisement

ನಗರ ಠಾಣೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಿತಿ ಸಭೆಯಲ್ಲಿ ದಲಿತ ಮುಖಂಡರ ಅಹ‌ವಾಲು ಆಲಿಸಿ ಮಾತನಾಡಿದ ಅವರು, ದಲಿತ ಕೇರಿ ಹಾಗೂ ಹಾಡಿಗಳಲ್ಲಿ ಮದ್ಯಮಾರಾಟ, ಇಸ್ಪೀಟ್‌ ಆಟದ ಬಗ್ಗೆ ಮಾಹಿತಿ ನೀಡಿದರೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು,

ಕೇರಳದ ವ್ಯಕ್ತಿಗಳಿಗೆ ಗಿರಿಜನರ ಜಮೀನು ಗುತ್ತಿಗೆ ಪಡೆಯಲು ಸಹಕಾರ ನೀಡುವ ಮಧ್ಯವರ್ತಿಗಳ ಬಗ್ಗೆಯೂ ಕಠಿಣ ಕಾನೂನು ಕ್ರಮ ಜರುಗಸಲಾಗುವುದೆಂದರು. ಬನ್ನಿಕುಪ್ಪೆ ತಾಪಂ ಸದಸ್ಯ ಕೆಂಗಯ್ಯ, ಮದ್ಯದ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ, ಬ್ಯಾರನ್‌ಗಳನ್ನೇ ಇಸ್ಪೀಟ್‌ ಅಡ್ಡೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ದೂರಿದರು.

ಸ್ಮಶಾನ ನಿರ್ಮಿಸಿ: ತಾಪಂ ಮಾಜಿ ಸದಸ್ಯ ಅಣ್ಣಯ್ಯನಾಯಕ, ಮುಖಂಡರಾದ ಗಜೇಂದ್ರ, ದೇವೇಂದ್ರ ಮಾತನಾಡಿ ಕೆಲ ಹಳ್ಳಿಗಳಲ್ಲಿ ದಲಿತರು ಸಾವನ್ನಪ್ಪಿದರೆ ಅಂತ್ಯಕ್ರಿಯೆಗೆ ಜಾಗವಿಲ್ಲ. ಇದ್ದರೂ ಒತ್ತುವರಿಯಾಗಿ ಸಮಸ್ಯೆಯಾಗಿದೆ.

ಇನ್ನು ಮದ್ಯ ಮಾರಾಟವನ್ನೇ ಕೆಲವರು ಕಾಯಕವನ್ನಾಗಿ ಮಾಡಿಕೊಂಡಿದ್ದು, ಕಡಿವಾಣ ಹಾಕದಿದ್ದಲ್ಲಿ ಸಮಸ್ಯೆ ಉಲ್ಪಣಗೊಳ್ಳಲಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು. ಸಮಾಜ ಕಲ್ಯಾಣ ಇಲಾಖೆಯವರು ಹಾಸ್ಟೆಲ್‌ ಪರಿಶೀಲಿಸುತ್ತಿದ್ದು, ಆದಿವಾಸಿಗಳಿಗೆ ವಿತರಿಸುವ ಪೌಷ್ಟಿಕ ಆಹಾರವೆಲ್ಲ ಅನ್ಯರಪಾಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ರಾಜ್ಯ ಲ್ಯಾಂಪ್ಸ್‌ ಮಹಾಮಂಡಳದ ಅಧ್ಯಕ್ಷ ಯಶೋಧರಪುರ ಕೃಷ್ಣಯ್ಯ, ಭರತವಾಡಿ, ಐಯ್ಯನಕೆರೆ, ಕೆರೆಹಾಡಿ, ವೀರನಹೊಸಹಳ್ಳಿಯ ಆದಿವಾಸಿಗಳು ಮೃತಪಟ್ಟರೆ ಹೂಳಲು ಜಾಗವಿಲ್ಲದಂತಾಗಿದ್ದು, ಬಲ್ಲೇನಹಳ್ಳಿಕೆಂಪರಾಜು ರತ್ನಪುರಿಯಲ್ಲಿನ ಮದ್ಯದಂಗಡಿಗಳನ್ನು ಸ್ಥಳಾಂತರಿಸಬೇಕು. ಹೊಸೂರು ಗೇಟ್‌ನಲ್ಲಿ ರಸ್ತೆಬದಿಯ ಅಂಗಡಿ ನಿರ್ಮಿಸಿಕೊಂಡು ರಸ್ತೆ ಅಭಿವೃದ್ಧಿಗೆ ತೊಡಕಾಗಿದೆ. ಈ ಅಂಗಡಿಯವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದರು.

ಪುಂಡರ ಹಾವಳಿ: ನಿಲುವಾಗಿಲು ಪ್ರಭಾಕರ್‌ ಮಾತನಾಡಿ, ರಾತ್ರಿ ವೇಳೆ ಹುಣಸೂರು ಆಸ್ಪತ್ರೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ನಿಯಂತ್ರಿಸಬೇಕು. ನಿಲುವಾಗಿಲು ಹಾಗೂ ಕೊತ್ತೆಗಾಲಯದಲ್ಲಿ ನಾಯಕ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಕೋರಿದರು.

ಚಿಕ್ಕ ಬೀಚನಹಳ್ಳಿಯ ಶಾಲೆಯಲ್ಲಿ ಶಿಕ್ಷಕರೇ ನಿತ್ಯ ಜಗಳವಾಡಿಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗ್ರಾಮದಲ್ಲಿ 2 ಎಕರೆ ಜಮೀನಿದ್ದು, ಇದನ್ನು ಶಾಲೆಗೆ ಮಂಜೂರು ಮಾಡಬೇಕೆಂದು ಗ್ರಾಮದ ದಲಿತ ಮುಖಂಡ ಮನವಿ ಮಾಡಿದರು. 

ನಿರ್ದಾಕ್ಷಿಣ್ಯ ಕ್ರಮ: ಎಸ್‌ಐಗಳಾದ ಪುಟ್ಟಸ್ವಾಮಿ, ಮಹೇಶ್‌ ಮಾತನಾಡಿ, ಅಕ್ರಮ ಮದ್ಯ ಮಾರಾಟ ಪತ್ತೆಯಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ವಿಮೆ ಇಲ್ಲದ ವಾಹನಗಳನ್ನು ಹಿಡಿದಾಗ ಮುಖಂಡರು ಮದ್ಯಪ್ರವೇಶಿಸಬಾರದು ಎಂದು ಕೋರಿದರು. ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮೋಹನ್‌ಕುಮಾರ್‌, ಗಿರಿಜನ ವಿಸ್ತರಣಾಧಿಕಾರಿ ಲೋಕೇಶ್‌ ಸೇರಿದಂತೆ  ನೂರಕ್ಕೂ ಹೆಚ್ಚು ದಲಿತ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next