ಮಂಗಳೂರು: ಶಂಕಿತ ಎಚ್1ಎನ್1ಗೆ ದ. ಕನ್ನಡದಲ್ಲಿ ಮತ್ತೂಂದು ಜೀವ ಬಲಿಯಾಗಿದೆ. ಒಂದು ತಿಂಗಳಿನಲ್ಲಿ ಸಾವಿನ ಸಂಖ್ಯೆ ಐದಕ್ಕೇರಿದೆ. ಬಂಟ್ವಾಳ ತಾಲೂಕಿನ ಕನ್ಯಾನ ಮೂಲದ ಉಮೇಶ್ ಗೌಡ ಅವರ ತಾಯಿ ಲಲಿತಾ (72) ಮೃತಪಟ್ಟವರು.
ಲಲಿತಾ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ದಾಖ
ಲಾಗಿದ್ದರು. ಶುಕ್ರವಾರ ರಾತ್ರಿ ಅವರನ್ನು ವೆನ್ಲ್ಯಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ
ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಸಾವನ್ನಪ್ಪಿದರು. ಶಂಕಿತ ಎಚ್1ಎನ್1ನೊಂದಿಗೆ ಇತರ ಕಾಯಿಲೆಗಳಿಂದಲೂ ಅವರು ಬಳಲುತ್ತಿದ್ದರು ಎಂದು ವೆನ್ಲ್ಯಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಈ ಹಿಂದೆ ಸಜಿಪನಡುವಿನ ಝಬೀನಾ (27), ಅವರ ತಾಯಿ ಅವ್ವಮ್ಮ (48), ವಾಮಂಜೂರಿನ ಕೆ. ಅಬ್ದುಲ್ಲ (50) ಹಾಗೂ ಉಳ್ಳಾಲದ ಜಮೀಲಾ ಶಂಕಿತ ಎಚ್1ಎನ್1ಗೆ ಮೃತಪಟ್ಟಿದ್ದರು. ಇದೀಗ ಲಲಿತಾ ಸಾವು ಸಂಭವಿಸಿದ್ದು, ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲೇ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ಕಳೆದ ವರ್ಷ ಎಚ್1ಎನ್1ಗೆ ಏಳು ಮಂದಿ ಬಲಿಯಾಗಿದ್ದರು.
39 ಮಂದಿಗೆ ಪಾಸಿಟಿವ್ ಜಿಲ್ಲೆಯಲ್ಲಿ 2018ರ ಜನವರಿಯಿಂದ ಕಳೆದ ಗುರುವಾರದ ತನಕ ಒಟ್ಟು 39 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಅಕ್ಟೋಬರ್ ತಿಂಗಳೊಂದರಲ್ಲೇ 24 ಪಾಸಿಟಿವ್ ಪ್ರಕರಣ ದಾಖಲಾಗಿರುವುದು ಗಮನಾರ್ಹ. ಆದರೆ ಈ ಸಂಖ್ಯೆಗೆ ಹೊಸ ಸೇರ್ಪಡೆ ಆಗಿಲ್ಲ ಎಂಬುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ತಿಳಿಸಿದ್ದಾರೆ. ಈ ಪೈಕಿ ಕೆಲವರು ಗುಣಮುಖರಾಗಿ ಮನೆಗೆ ತೆರಳಿದರೆ, ಉಳಿದವರು ವಿವಿಧ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟಂಬರ್ ತಿಂಗಳಲ್ಲಿ 12 ಪ್ರಕರಣ ದಾಖಲಾಗಿದ್ದವು.
ಮಂಗಳೂರಿಗರೇ ಹೆಚ್ಚು!
ಈ ವರ್ಷ ಇಲ್ಲಿಯವರೆಗೆ ಒಟ್ಟು 403 ಮಂದಿಯನ್ನು ಎಚ್1ಎನ್1 ಪರೀಕ್ಷೆಗೆ ಒಳಪಡಿಸಲಾಗಿತ್ತು. ದಾಖ ಲಾಗಿರುವ ಪಾಸಿಟಿವ್ ಪ್ರಕರಣಗಳು 39. ಅ. 17ರವರೆಗೆ ಮಂಗಳೂರಿನಲ್ಲಿ ಪರೀಕ್ಷಿಸಿದ 260ರ ಪೈಕಿ 26 ಪಾಸಿಟಿವ್, ಬಂಟ್ವಾಳದಲ್ಲಿ 32ರಲ್ಲಿ 2 ಪಾಸಿಟಿವ್, ಬೆಳ್ತಂಗಡಿಯಲ್ಲಿ 34ರಲ್ಲಿ 1 ಪಾಸಿಟಿವ್ ಕಂಡು ಬಂದಿತ್ತು. ಸುಳ್ಯ ಮತ್ತು ಪುತ್ತೂರಿನಲ್ಲಿ ಯಾವುದೇ ಪ್ರಕರಣವಿಲ್ಲ. ಅ. 17ರ ಬಳಿಕದ ಅಂಕಿಅಂಶ ಲಭ್ಯವಾಗಿಲ್ಲ ಎಂದರು.
ಮಾಹಿತಿ ಇಲ್ಲ
ಶಂಕಿತ ಎಚ್1ಎನ್1ಗೆ ಶನಿವಾರ ಸಾವು ಸಂಭವಿಸಿರುವ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ ಜಿಲ್ಲೆಯಲ್ಲಿ ಎಚ್1ಎನ್1 ಸಂಖ್ಯೆ ಈವರೆಗೆ 39 ಇದ್ದು, ಹೆಚ್ಚಳವಾಗಿಲ್ಲ. ಅಧಿಕಗೊಂಡಲ್ಲಿ ಮಾಹಿತಿ ನೀಡಲಾಗುವುದು.
ಡಾ| ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ