ಪಿರಿಯಾಪಟ್ಟಣ: ತಾಲೂಕಿನ ಬೈಲಕುಪ್ಪೆ ಟಿಬೆಟನ್ ನಿರಾಶ್ರಿತರ ತಾಣದಲ್ಲಿ ಎಚ್1ಎನ್1 ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಎಚ್ಚರದಿಂದಿರಬೇಕು ಎಂದು ಡಾ. ಶಿವಕುಮಾರ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬೀದಿ ನಾಟಕದ ಜಾಗೃತಿ ಕಾರ್ಯಕ್ರಮದಲ್ಲಿ ಮಾತ ನಾಡಿದರು. ಡೋಲು ಬಾರಿಸುವುದರ ಮೂಲಕ ಬೈಲಕುಪ್ಪೆ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಎಚ್‌ಇಒ ಪಿಪಿ ಲತಾ ಮಾತನಾಡಿ, ಎಚ್ 1 ಎನ್ 1 ವೈರಸ್‌ಗಳಿಂದ ಹರಡುವ ಉಸಿರಾಟದ ಸೋಕು ರೋಗ, ಸಾಮಾನ್ಯ ಶೀತ, ಜ್ವರದ ಹಾಗೆಯೇ ಮನುಷ್ಯರಲ್ಲಿ ಕಾಣಿಸಿ ಕೊಳ್ಳುತ್ತದೆ. ಇದರ ಜತಗೆ, ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಜ್ವರದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸಮೀಪದ ಆಸ್ಪತ್ರೆಯ ವೈದ್ಯರನ್ನು ಭೇಟಿ ಮಾಡಿ ಎಂದರು. ವೈದ್ಯಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಸೀನುವಾಗ, ಕೆಮ್ಮುವಾಗ, ಕರವಸ್ತ್ರ ಬಳಸಬೇಕು, ಬಳಸಿದ ಕರವಸ್ತ್ರವನ್ನು ಬೇರೆಯವರು ಮುಟ್ಟದಂತೆ ಎಚ್ಚರವಹಿಸಬೇಕು.
ಕರವಸ್ತ್ರ ಇರದಿದ್ದರೆ ಬಾಯಿಗೆ ಕೈ ಒಡ್ಡಬಾರದು, ಬಾಯಿಗೆ ತೋಳನ್ನು ಅಡ್ಡ ತರಬೇಕು. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರ ಬಳಿಗೆ ಬರಬೇಕು ಎಂದು ತಿಳಿಸಿದರು. ಆರೋಗ್ಯ ಅಧಿಕಾರಿಗಳಾದ ಪ್ರಕಾಶ್, ಶಶಿಧರ್, ಭವಾನಿ, ಪ್ರದೋಶ್ ಇದ್ದರು.