Advertisement

ಜಿಲ್ಲೆಯಲ್ಲಿ ಎಚ್‌1ಎನ್‌1 ಪ್ರಕರಣ ಇಳಿಕೆ

06:38 PM Feb 29, 2020 | Team Udayavani |

ತುಮಕೂರು: ಎಚ್‌1ಎನ್‌1 ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಕಳೆದ ವರ್ಷ 4 ಜನ ಮೃತಪಟ್ಟಿದ್ದರು. ಪ್ರಸ್ತುತ ವರ್ಷ ಸಂಶಯಾಸ್ಪದವಾಗಿ ಒಬ್ಬರು ಮೃತಪಟ್ಟಿದ್ದು, 10 ಜನರಿಗೆ ಸೋಂಕು ಇರುವ ಅನುಮಾನದಿಂದ ರಕ್ತಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಒಬ್ಬರಿಗೆ ಎಚ್‌ 1ಎನ್‌1 ತಗುಲಿರುವುದು ದೃಢಪಟ್ಟಿದೆ.

Advertisement

2009ರಲ್ಲಿ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿ ಭಾರತಕ್ಕೂ ಕಾಲಿಟ್ಟು ಕರ್ನಾಟಕದ ಜನರನ್ನು ಬೆಚ್ಚಿ ಬೀಳಿಸಿದ್ದ ಎಚ್‌1ಎನ್‌1 ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆದು ಪ್ರಾರಂಭದಲ್ಲಿಯೇ 59 ಜನರಲ್ಲಿ ರೋಗದ ಲಕ್ಷಣ ಕಂಡುಬಂದಿತ್ತು. ಅದರಲ್ಲಿ ಒಂದೇ ತಿಂಗಳಲ್ಲಿ ನಾಲ್ವರು ಮೃತಪಟ್ಟಿದ್ದರು. ಪ್ರತಿ ವರ್ಷವೂ ಅಲ್ಲೊಂದು ಇಲ್ಲೊಂದು ಹಂದಿಜ್ವರದ ಪ್ರಕರಣ ಪತ್ತೆಯಾಗುತ್ತಿದ್ದವು. ಉಸಿರಾಟದ ತೊಂದರೆ, ಜ್ವರ, ತಲೆನೋವು, ಮೈ,ಕೈ, ನೋವಿನಿಂದ ಬಳಲಿ ಕೊನೆಗೆ ರೋಗ ಗುಣಮುಖವಾಗದೆ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತಿತ್ತು. ಜನರಲ್ಲಿ ಹೆಚ್ಚು ಅರಿವು ಮೂಡಿದಂತೆ ಇಂತಹ ಮಾರಕರೋಗ ಹತೋಟಿಗೆ ಬರುತ್ತಿದೆ.

ಜಿಲ್ಲೆಯಲ್ಲಿ 2014ರಲ್ಲಿ ಹೆಚ್ಚು ರೋಗದ ಲಕ್ಷಣ ಕಂಡು ಬಂದಿತ್ತು. 47 ಜನರ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿ 7 ಜನರಿಗೆ ಹಂದಿಜ್ವರ ದೃಢವಾಗಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದರು. 2015ರಲ್ಲಿ 5 ಜನರಿಗೆ ರೋಗ ಲಕ್ಷಣಗಳು ಕಂಡು ಬಂದಿತ್ತು. ಅದರಲ್ಲಿ 3 ಜನ ಮೃತಪಟ್ಟಿದ್ದರು. 2016ರಲ್ಲಿ ಜಿಲ್ಲೆಯಲ್ಲಿ 98 ರಕ್ತ ಪರೀಕ್ಷೆ ಮಾಡಿಸಲಾಗಿತ್ತು. 9 ಜನರಲ್ಲಿ ರೋಗದ ಲಕ್ಷಣ ಕಂಡುಬಂದು ಮೂವರು ಮೃತಪಟ್ಟಿದ್ದರು.

2017ರಲ್ಲಿ 187 ಜನರ ರಕ್ತಮಾದರಿ ಪರೀಕ್ಷಿಸಲಾಗಿತ್ತು. ಅದರಲ್ಲಿ 36 ಜನರಿಗೆ ಕಾಣಿಸಿಕೊಂಡು ನಾಲ್ವರು ಮೃತಪಟ್ಟಿದ್ದರು. 2018ರಲ್ಲಿ 130 ಜನರ ರಕ್ತ ಪರೀಕ್ಷಿಸಿದಾಗ 25 ಜನರಲ್ಲಿ ಹಂದಿಜ್ವರ ಕಾಣಿಸಿಕೊಂಡು, 12 ಜನ ಮೃತಪಟ್ಟಿದ್ದರು. 2019ರಲ್ಲಿ 144 ರಕ್ತ ಪರೀಕ್ಷೆ ಮಾಡಲಾಗಿ 22 ಜನರಿಗೆ ರೋಗಲಕ್ಷಣ ಕಂಡು ಬಂದು ನಾಲ್ವರು ಮೃತಪಟ್ಟಿದ್ದರು. ಪ್ರಸ್ತುತ ವರ್ಷ 2020ರ ಫೆಬ್ರವರಿ 28ರ ವೇಳೆಗೆ 10 ಜನರ ರಕ್ತ ಮಾದರಿ ಪರೀಕ್ಷಿಸಿದ್ದು, ಅದರಲ್ಲಿ ಒಬ್ಬರಿಗೆ ಎಚ್‌1ಎನ್‌1 ಇರುವುದರ ಬಗ್ಗೆ ದೃಢಪಟ್ಟಿದ್ದು, ಒಬ್ಬರು ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ.

ಈ ಅವಧಿಯಲ್ಲಿ ತೀವ್ರತೆ ಪಡೆದುಕೊಳ್ಳುತ್ತಿದ್ದ ಹಂದಿಜ್ವರ ಜನರ ಜಾಗೃತಿ ಮತ್ತು ರೋಗ ಲಕ್ಷಣ ಕಂಡು ಬಂದ ತಕ್ಷಣ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರೋಗದಿಂದ ಮೃತಪಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

Advertisement

 

-ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next