Advertisement

ಎಚ್.ವಿಶ್ವನಾಥ್‌ ಚಮಚಾಗಿರಿ ಹೇಳಿಕೆ ಸದಭಿರುಚಿ ನಡವಳಿಕೆಯಲ್ಲ

11:02 AM May 14, 2019 | Suhan S |

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕರ ಕುರಿತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌ರ ಹೇಳಿಕೆ ಸಾರ್ವಜನಿಕ ಜೀವನದಲ್ಲಿ ಸದಭಿರುಚಿಯ ನಡವಳಿಕೆ ಅಲ್ಲ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಸಿ.ಬಿ.ಕೃಷ್ಣಬೈರೇಗೌಡ ಟೀಕಿಸಿದರು.

Advertisement

ಬರ ಪರಿಶೀಲನೆಗೆಂದು ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸಮರ್ಥ ಮುಖ್ಯಮಂತ್ರಿ ಎಂಬುದು ನಿರ್ವಿವಾದ, ಈ ನಾಡಿನ ಜನತೆಯೇ ಒಪ್ಪಿಕೊಂಡಿ ದ್ದಾರೆ, ವಿಶ್ವನಾಥ್‌ರ ಹೇಳಿಕೆಗೆ ನಾನೇನು ವಿಚಲಿತ ನಾಗಿಲ್ಲ ಮತ್ತು ಸಿದ್ದರಾಮಯ್ಯ ಅವರ ನಡವಳಿಕೆಯ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.

ಚುನಾವಣೆ ಫಲಿತಾಂಶದ ಆಧಾರದ ಮೇಲೆಯೇ ಮುಖ್ಯಮಂತ್ರಿ ಸಮರ್ಥನೆಂದು ಭಾವಿಸಲು ಆಗಲ್ಲ, ಸೋಲುಗೆಲುವು ಬೇರೆ, ಅರಸು ಸಹಾ ಚುನಾವಣೆಯಲ್ಲಿ ಸೋತಿದ್ದರು, ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ಎಸ್‌.ಎಂ.ಕೃಷ್ಣ ಸರಕಾರವೂ ಸೋಲುಂಡಿತ್ತು. ಚುನಾವಣೆಯೊಂದೇ ಉತ್ತಮ ಆಡಳಿತಕ್ಕೆ ಮಾನದಂಡವಲ್ಲ ಎಂದರು.

ಸಹೋದ್ಯೋಗಿ ಶಾಸಕರ ಕುರಿತು ಚಮಚಾಗಿರಿ ಎಂಬ ಪದ ಬಳಕೆ ಮಾಡಿರುವುದು ಉತ್ತಮ ನಡವಳಿಯಲ್ಲ. ಸಾರ್ವಜನಿಕ ಜೀವನದಲ್ಲಿ ಸಹೋದ್ಯೋಗಿಗಳ ಕುರಿತು ಈ ರೀತಿ ಮಾತನಾಡಬಾರದು, ಇದು ಅವರ ವೈಯಕ್ತಿಕ ಟೀಕೆ ಇರಬಹುದು ಇದರ ಕುರಿತು ಗಂಭೀರವಾಗಿ ಪರಿಗಣಿಸಲು ಹೋಗಲ್ಲ ಮತ್ತು ಅವರ ಹೇಳಿಕೆ ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದು ತಿಳಿಸಿದರು.

ಶಿಸ್ತು ಕಾಪಾಡಬೇಕು, ಬಹಳ ವೈಯುಕ್ತಿಕವಾಗಿ ತೆಗೆದುಕೊಳ್ಳುವುದು ಸರಿಯಲ್ಲ, ಎರಡು ಪಕ್ಷಗಳ ಹಾದಿಯಲ್ಲಿ ಸಮನ್ವಯತೆಯಡಿ ಸಾಗಬೇಕಾಗುತ್ತದೆ ಎಂದು ಸಲಹೆ ನೀಡಿದರು.

Advertisement

ಜೆಡಿಎಸ್‌ ನಾಯಕರು ವಿಶ್ವನಾಥ್‌ರನ್ನು ಛೂ ಬಿಡುತ್ತಿದ್ದಾರಾ ಎಂಬ ಪ್ರಶ್ನೆಗೆ ನಾನು ಅಷ್ಟೊಂದು ಆಳವಾಗಿ ವಿಶ್ಲೇಷಣೆ ಮಾಡಲು ಹೋಗೋದಿಲ್ಲ, ಅವರ ಉದ್ದೇಶ ಏನೆಂದು ಅವರನ್ನೇ ಪ್ರಶ್ನಿಸಿ ಎಂದು ಜಾರಿಕೊಂಡರು.

ಸರಕಾರ ಭದ್ರ, ಆತಂಕವೇ ಇಲ್ಲ: ಸರಕಾರದ ಭದ್ರತೆಗೆ ಯಾವುದೇ ಧಕ್ಕೆ ಇಲ್ಲ, ಅಳಿವು-ಉಳಿವು ಮಾತುಗಳ ಅಗತ್ಯತೆಯೂ ಇಲ್ಲ, ನಾವೆಲ್ಲಾ ಒಟ್ಟಾಗಿದ್ದೇವೆ, ಎರಡು ಪಕ್ಷಗಳಾದ್ದರಿಂದ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯ ಸಹಜ, ಇದನ್ನು ರಾಹುಲ್ಗಾಂಧಿ, ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ, ದಿನೇಶ್‌ ಗುಂಡೂರಾವ್‌ ಕುಳಿತು ಮಾತನಾಡಿ ಸಮಸ್ಯೆಗಳಿದ್ದರೆ ಪರಿಹರಿಸುತ್ತಾರೆ ಎಂದರು.

ರಾಜಕೀಯ ಧೃವೀಕರಣ, ಪ್ರತಿಪಕ್ಷ ಸರಕಾರ:ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಬದಲಾವಣೆ ಬಯಸಿದ್ದಾರೆ, ದೇಶದಲ್ಲಿ ಖಂಡಿತ ಬದಲಾವಣೆಯಾಗುತ್ತದೆ, ಪ್ರತಿಪಕ್ಷಗಳ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬರಲಿದೆ, ಇದರಿಂದ ಕರ್ನಾಟಕದ ಸಮ್ಮಿಶ್ರ ಸರ್ಕಾರಕ್ಕೆ ಅನುಕೂಲವಾಗಲಿದೆ. ರಾಜಕೀಯ ಧೃವೀಕರಣದಿಂದಾಗಿ ಪ್ರತಿ ಪಕ್ಷಗಳ ಸರ್ಕಾರ ಕೇಂದ್ರದಲ್ಲಿ ಬಂದರೆ ಧನಾತ್ಮಕ ಪರಿಣಾಮ ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ, ರಾಜ್ಯ ಸರ್ಕಾರದ ಭವಿಷ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ವಷ್ಟಪಡಿಸಿದರು.

ಬೆಂಗಳೂರು ಉತ್ತರ ಗೆಲ್ಲುವ ವಿಶ್ವಾಸ: ಬೆಂಗಳೂರು ಉತ್ತರದಲ್ಲಿ ಗೆಲ್ಲುವ ವಿಶ್ವಾಸವಿದೆ ಆದರೆ, ಚುನಾವಣೆಯಾದ್ದರಿಂದ ಮತ ಎಣಿಕೆಯವರೆಗೂ ಕಾಯಬೇಕು ಎಂದ ಅವರು, ಕೋಲಾರದಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ. ಕೋಲಾರದಲ್ಲಿ ಎರಡೂ ಪಕ್ಷಗಳು ಒಂದಾಗಿ ಅಭ್ಯರ್ಥಿಯನ್ನು ಹಾಕಿರುವುದರಿಂದ ಇಲ್ಲಿ ಗೆಲ್ಲುವ ವಿಶ್ವಾಸವಿದೆ, ದೇಶದಲ್ಲೂ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಸ್ಥಿತಿ ಮುಂದುವರಿದಿದ್ದು, ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಚುನಾವಣಾ ನೀತಿ ಸಂಹಿತೆ ಇದ್ದಿದ್ದರಿಂದಾಗಿ ಪರಿಶೀಲನೆಗೆ ಬರಲಾಗಲಿಲ್ಲ, ಬುಧವಾರವಷ್ಟೇ ನನ್ನ ಒತ್ತಾಯಕ್ಕೆ ಕೇಂದ್ರ ಚುನಾವಣಾ ಆಯೋಗ ಬರ ಪರಿಶೀಲನಾ ಸಭೆಗೆ ಮಾತ್ರ ಅವಕಾಶ ನೀಡಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next