Advertisement

ಸಿದ್ದರಾಮಯ್ಯರಿಂದಾಗಿ ನಾ ಪಕ್ಷ ತೊರೆಯುವ ಸ್ಥಿತಿ ಬಂದಿದೆ:ವಿಶ್ವನಾಥ್

09:15 AM May 09, 2017 | |

ಮೈಸೂರು: ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಅವರ ವಿರುದ್ಧ ಕಾಂಗ್ರೆಸ್‌ನ ಬಹುತೇಕ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳು ಆರೋಪಗಳ ಸುರಿಮಳೆಗೈದ ಬೆನ್ನಲ್ಲೇ ಹಿರಿಯ ಕಾಂಗ್ರೆಸ್‌ ನಾಯಕ ಮಾಜಿ ಸಂಸದ ಎಚ್‌.ವಿಶ್ವನಾಥ್‌ ಅವರು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರಿಗೆ ಪತ್ರ ಬರೆದು ಬಳಿಕ ಭೇಟಿಯಾಗಿ ಮಾತುಕತೆ ನಡೆಸಿ ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದಾರೆ.

Advertisement

ದೇಶಾದ್ಯಂತ ಕಾಂಗ್ರೆಸ್‌ ಪಕ್ಷ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದ್ದು,ಹಲವು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಧೋರಣೆಯಿಂದ ನಾನೂ ಪಕ್ಷ ತೊರೆಯಬಹುದು ಎಂದು ಬರೆದಿದ್ದಾರೆ. 

ನಾನು ಎಐಐಸಿಸಿ ,ಕೆಪಿಸಿಸಿ ಸದಸ್ಯನಾಗಿದ್ದರೂ ಪಕ್ಷದ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ. ಶೋಕಾಸ್‌ ನೊಟೀಸ್‌ ನೀಡಿ ನನ್ನ ಬಾಯಿ ಮುಚ್ಚಿಸಿದ್ದಾರೆ ಎಂದು ಅಸಮಧಾನ ಹೊರ ಹಾಕಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ನೇರ ಕಾರಣ. 

ಸಿದ್ದರಾಮಯ್ಯ ಸಂಪುಟದಲ್ಲಿರುವ ಹಲವು ಸಚಿವರು ಕ್ರಿಮಿನಲ್‌ ಆರೋಪ ಎದುರಿಸುತ್ತಿದ್ದಾರೆ. ನಾನು ನಾಲ್ಕು ದಶಕಗಳಿಂದ ಪಕ್ಷಕ್ಕೆ ದುಡಿದಿದ್ದೇನೆ, ಈಗ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಅಸಮಧಾನವನ್ನು ಹೊರಹಾಕಿದ್ದಾರೆ. 

ಸರ್ಕಾರದ ಸಾಧನೆಯಿಂದ ಉಪಚುನಾವಣೆಯಲ್ಲಿ ಗೆಲುವು ಲಭಿಸಲಿಲ್ಲ, ವಿಪಕ್ಷಗಳ ವೈಫ‌ಲ್ಯದಿಂದ ಗೆಲುವು ಸಿಕ್ಕಿದೆ ಅಷ್ಟೆ ಎಂದು ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Advertisement

ಕುಮಾರಕೃಪದಲ್ಲಿ ಭೇಟಿ 
ಪತ್ರ ಬರೆದ ಬೆನ್ನಲ್ಲೇ ವೇಣುಗೋಪಾಲ್‌ ಅವರು ವಿಶ್ವನಾಥ್‌ ಅವರನ್ನು ಮಂಗಳವಾರ ಬೆಳಗ್ಗೆ ಕುಮಾರಕೃಪಾ ಅತಿಥಿಗೃಹಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. 

ಮಾತುಕತೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌ ಪಕ್ಷದ ನಾಯಕರ ನಡವಳಿಕೆಗಳು ಬದಲಾಗಬೇಕು. ಸರ್ಕಾರದ ಬಗ್ಗೆ ಜನಾಭಿಪ್ರಾಯ ಏನಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
 
‘ಪಕ್ಷಕ್ಕಾಗಿ ಯಾರು ತಮ್ಮ ಮನೆಯ ಹಣ ವ್ಯಯಿಸಿ ಕೆಲಸ ಮಾಡಿದ್ದಾರೋ ಅವರನ್ನು ಕರೆದು ಮಾತನಾಡಿಸುವ ಸಾಮಾನ್ಯ ಸೌಜನ್ಯ ಉಳಿದಿಲ್ಲ. ಭ್ರಷ್ಟಾಚಾರ ರಹಿತ ವ್ಯಕ್ತಿತ್ವ ಹೊಂದಿರುವ ವೇಣುಗೋಪಾಲ್‌ ಅವರು ಕುಮಾರಕೃಪದಲ್ಲಿ ಕಾರ್ಯಕರ್ತರ ಅಳಲು ಆಲಿಸಲಿ’ ಎಂದರು. 

‘2013 ಎಪ್ರಿಲ್‌ 13 ರಂದು ಸಿದ್ದರಾಮಯ್ಯನಾದ ನಾನು ಎಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ನನಗೆ ರೋಮಾಂಚನ,ಆನಂದ ಭಾಷ್ಪ ಸುರಿದ್ದಿತ್ತು.ಆದರೆ ಈಗ ಆ ಥ್ರಿಲ್‌ ಉಳಿದ್ದಿಲ್ಲ‘ 
ಎಂದರು. 

‘ವೇಣು ಗೋಪಾಲ್‌ ನನಗೆ 2006 ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರ್ಪಡೆ ವೇಳೆ ನೀವು ಹೀರೋ  ಅಂದಿದ್ದೀರಿ ಈಗ ಹೀಗೇಕೆ’ ಎಂದು ಕೇಳಿದರು ಎಂದು ವಿಶ್ವನಾಥ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next