Advertisement
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿಯ ಎಚ್. ವಿಶ್ವನಾಥ್, ಹಣಕಾಸು ಇಲಾಖೆಯಲ್ಲಿ ಹಲವು ವರ್ಷಗಳಿಂದ ಕೆಲವು ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಹೀಗೆ ಯಾವೊಬ್ಬ ವ್ಯಕ್ತಿ ಒಂದೇ ಜಾಗದಲ್ಲಿ ಉಳಿದುಕೊಂಡಾಗ, ಅದಕ್ಕೆ ಆ ವ್ಯಕ್ತಿಯೇ ಮಾಲಕನಾಗಿಬಿಡುವ ಅಪಾಯ ಇರುತ್ತದೆ. ಸಾವಿರಾರು ಕೋಟಿ ರೂ. ಸಾಲ ಇದ್ದು, ಆದಾಯ ಖೋತಾ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಇಲಾಖೆಯ ಆಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದು ಹೇಳಿದರು.
ಈ ಹಿಂದೆಲ್ಲ ಹಣಕಾಸು ಇಲಾಖೆಯನ್ನು ಬೇರೊಬ್ಬ ಸಚಿವರಿಗೆ ನೀಡಲಾಗುತ್ತಿತ್ತು. ಆ ಸಚಿವರೇ ಬಜೆಟ್ ಮಂಡನೆ ಕೂಡ ಮಾಡುತ್ತಿದ್ದರು. ಕಳೆದೆರಡು ದಶಕಗಳಲ್ಲಿ ಈ ಪದ್ಧತಿ ಬದಲಾಗಿದ್ದು, ಮುಖ್ಯಮಂತ್ರಿಗಳ ಬಳಿಯೇ ಈ ಖಾತೆ ಇರುತ್ತದೆ. ಹಿಂದಿನ ವ್ಯವಸ್ಥೆಯಂತೆಯೇ ಸಚಿವರಿಗೆ ನೀಡಬೇಕು. ಹಾಗಂತ, ಸಿಎಂ ಆದವರಿಗೆ ಇದನ್ನು ನಿಭಾಯಿಸುವ ಸಾಮರ್ಥ್ಯ ಇಲ್ಲ ಎಂದಲ್ಲ. ಈಗಾಗಲೇ ಆಗಿ ಹೋದವರೂ ಸೇರಿ ಎಲ್ಲ ಮುಖ್ಯಮಂತ್ರಿಗಳೂ ಸಮರ್ಥ ರಾಗಿದ್ದಾರೆ. ಆದರೆ, ಅದನ್ನು ನಿಭಾಯಿಸಲು ಅವರಲ್ಲಿ ಸಮಯ ಎಲ್ಲಿದೆ ಎಂದು ವಿಶ್ವನಾಥ್ ಕೇಳಿದರು. ಖಾತೆ ಹೊಂದಿರದ ಪ್ರಧಾನಿ ಮೋದಿ ಮಾದರಿ
ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಮಾದರಿ ಎಂದ ಅವರು, ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೂ ಮೋದಿ ಅವರು ಯಾವುದೇ ಖಾತೆ ಹೊಂದಿರಲಿಲ್ಲ. ಅದೇ ರೀತಿ, ಪ್ರಧಾನಿಯಾದ ಮೇಲೂ ಯಾವ ಖಾತೆಯೂ ಅವರ ಬಳಿ ಇಲ್ಲ ಎಂದರು.
Related Articles
ಆಡಳಿತದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಹೇಳಿದ ಎಚ್. ವಿಶ್ವನಾಥ್, ಈ ಹಿನ್ನೆಲೆಯಲ್ಲಿ ಆಡಳಿತಕ್ಕೆ ಸಂಬಂಧಿಸಿದ ಚರ್ಚೆಗಾಗಿಯೇ ಕನಿಷ್ಠ ಒಂದು ವಾರ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದರು. ಆಡಳಿತವೆಂದರೆ ಅಧಿಕಾರಿಗಳಿಂದ, ಅಧಿಕಾರಿಗಳಿಗಾಗಿ ಮತ್ತು ಅಧಿಕಾರಿಗಳಿಗೋಸ್ಕರ ಎಂಬಂತಾಗಿದೆ. ಶೇ. 40 ಅಧಿಕಾರಿಗಳು ಖಾಲಿ ಇದ್ದಾರೆ. ಇನ್ನು ಕೆಲವರು 2-3 ಹುದ್ದೆಗಳನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯವಾಗಿ ಆಡಳಿತ ಬಲದ ಮೇಲೆ ಅಭಿವೃದ್ಧಿಯ ಪಥ ಸಾಗುತ್ತದೆ. ಬಲವೇ ಇಲ್ಲವೆಂದಾದರೆ ಅಭಿವೃದ್ಧಿ ಹೇಗೆ? ಆದ್ದರಿಂದ ಆಡಳಿತದ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು. ಅಲ್ಲಿ ಬರುವ ಅಭಿಪ್ರಾಯಗಳನ್ನು ಆಧರಿಸಿ, ಆಡಳಿತವನ್ನು ಬಿಗಿಗೊಳಿಸಬೇಕೆಂದು ಮುಖ್ಯಮಂತ್ರಿಗೆ ಸಲಹೆ ಮಾಡಿದರು.
Advertisement
ಹಣಕಾಸು ಇಲಾಖೆಯೇ ಸಿಎಂ?ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಮಾತನಾಡಿ, ಹಣಕಾಸು ಇಲಾಖೆಯ ಧೋರಣೆ ನೋಡಿದರೆ, ಈ ಸರಕಾರವನ್ನು ನಡೆಸುತ್ತಿದೆಯೇ ಎಂಬ ಅನುಮಾನ ಬರುತ್ತಿದೆ. ಒಂದು ವೇಳೆ ಹೌದಾದರೆ, ಮುಖ್ಯಮಂತ್ರಿಗಳು ಯಾಕೆ ? ಶಾಸಕರು, ಪರಿಷತ್ತಿನ ಸದಸ್ಯರು ಯಾಕೆ? ಇದು ಜನಪ್ರತಿನಿಧಿಗಳಿಗೆ ಆದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿಗಳು ಕಳುಹಿಸಿದ ಪ್ರಸ್ತಾವನೆಯನ್ನೇ ಹಣಕಾಸು ಇಲಾಖೆ ತಿರಸ್ಕರಿಸುತ್ತದೆ. ಮುಖ್ಯಮಂತ್ರಿಗಳ ಸೂಚನೆಗೇ ಬೆಲೆ ಇಲ್ಲ. ಅವರನ್ನು ಕೇಳಿಯೇ ಎಲ್ಲವನ್ನೂ ಮಾಡುವುದಾದರೆ ನಾವೇಕೆ? ಹಲವು ವರ್ಷಗಳಿಂದ ಕೆಲವು ಅಧಿಕಾರಿಗಳು ಹಣಕಾಸು ಇಲಾಖೆಯಲ್ಲಿಯೇ ಬೀಡುಬಿಟ್ಟಿದ್ದಾರೆ. ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯನ್ನು ಅಧಿಕಾರಿಗಳ ಕೈಗಿಟ್ಟು ಕುಳಿತಿದ್ದಾರೆ. ಆದ್ದರಿಂದ ಉತ್ತಮವಾಗಿ ನಿರ್ವಹಣೆ ಮಾಡುವ ಸಾಮರ್ಥ್ಯ ಇರುವ ಮಂತ್ರಿಗಳಿಗೆ ವಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು.