ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಇಡಿ ಪ್ರಕರಣದಲ್ಲಿ ಜಯ ಗಳಿಸುತ್ತಾರೆ ಎನ್ನುವ ವಿಶ್ವಾಸ ಇದೆ. ನಾವೆಲ್ಲರೂ ಅವರ ಜೊತೆಗೆ ಇದ್ದೇವೆ ಎಂದು ಮಾಜಿ ಸಚಿವ ಎಚ್. ಎಂ. ರೇವಣ್ಣ ಹೇಳಿದರು
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರಿಗೆ ತಂದೆಯ ದಿನಕ್ಕೆ ದೂಪ ಹಾಕಲು ಹೋಗಲಾಗಿಲ್ಲ ಎಂದು ಕಣ್ಣೀರು ಹಾಕಿದರೆ ಅದಕ್ಕೂ ಆರೋಪ ಮಾಡುತ್ತಾರೆ.ಡಿಸಿಎಂ ಅಶ್ವಥ್ ನಾರಾಯಣ ತೀರ ಅಪಹಾಸ್ಯದಲ್ಲಿ ಮಾತನಾಡುತ್ತಿರುವುದು ಬಿಜೆಪಿಯವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದನ್ನು ತೋರಿಸುತ್ತದೆ ಎಂದರು.
ಬಿಜೆಪಿಯವರು ಓಲ್ಡ್ ಏಜ್ ಪೆನ್ಷನ್ ಪಡಿತಿದ್ದಾರಾ ಅಥವಾ ಬಿಪಿಎಲ್ ಕಾರ್ಡ್ ಹೊಂದಿದ್ದಾರಾ? ಬೇರೆ ಪಕ್ಷದಿಂದ ಬಿಜೆಪಿಗೆ ಹೋದರೆ ಅವರು ಮಹಾನ್ ನಾಯಕರಾಗುತ್ತಾರೆ ಅಂದರೆ ಅದರ ತನಿಖೆಯ ಹಿನ್ನೆಲೆ ಏನು ಎನ್ನುವುದು ಸಾಮಾನ್ಯರಿಗೆ ಅರ್ಥ ಆಗುತ್ತದೆ ಎಂದು ರಾಜ್ಯ ಬಿಜೆಪಿಯ ಮೇಲೆ ಎಚ್ ಎಂ ರೇವಣ್ಣ ಕಿಡಿಕಾರಿದರು.
ರಾಷ್ಟದಲ್ಲಿ ಹಣಕಾಸಿನ ಪರಿಸ್ಥಿತಿ ಸಂಕಷ್ಟ ಇದೆ. ನೋಟು ಅಪನಗದೀಕರಣ ಆದಾಗ ನಾವು ಆರೋಪ ಮಾಡಿದ್ದೇವು. ಆದರೆ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ವಿಶ್ವದಲ್ಲಿ 5 ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕ ಸ್ಥಿತಿ ಈಗ 7 ಸ್ಥಾನಕ್ಕೆ ಹೋಗಿದೆ. ಮನಮೋಹನ್ ಸಿಂಗ್ ಅವರು ಈ ಬಗ್ಗೆ ಪ್ರಧಾನಿ ಹಾಗೂ ದೇಶದ ಗಮನ ಸೆಳೆದಿರುವುದು ಶ್ಲಾಘನೀಯ ಎಂದರು
ಪ್ರಧಾನಿ ಮೋದಿ ಇನ್ನಾದರೂ ಈ ಬಗ್ಗೆ ಗಮನ ಹರಿಸಬೇಕು. ಪ್ರಧಾನಿ ವಿದೇಶ ಸುತ್ತುವುದನ್ನು ಬಿಟ್ಟು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕೆಲಸ ಮಾಡಲಿ. ಭಾವನಾತ್ಮಕವಾಗಿ ದೇಶ ಕಟ್ಟಲು ಸಾಧ್ಯವಿಲ್ಲ. ಅದು ಬಹಳ ದಿನ ನಡೆಯುವುದಿಲ್ಲ. ಪ್ರಧಾನಿ ವಾಸ್ತವದ ಮೇಲೆ ಆಡಳಿತ ನಡೆಸಬೇಕಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಳ್ಳಲಾಗುತ್ತಿದೆ. ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗ, ಇಡಿ, ಸಿಬಿಐಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಎಚ್ ಎಂ ರೇವಣ್ಣ ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ನಡೆಸಿದರು.