ಮೈಸೂರು: ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಗಿಂತ ಮೊದಲ ಶತ್ರು ಜೆಡಿಎಸ್ ಪಕ್ಷ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುರಿದಿರುವ ಬಗ್ಗೆ ಪರೋಕ್ಷವಾಗಿ ತಿಳಿಸಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 15 ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ನಡೆಸುವ ದಿನಾಂಕ ಘೋಷಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು.
ಉಪಚುನಾವಣೆ ಫಲಿತಾಂಶದ ಮೂಲಕ ರಾಜ್ಯ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ. ಜನರೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು. ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿರುವ ಕ್ಷೇತ್ರ ಹುಣಸೂರು. ಇಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ನನ್ನ ಸಮಯವನ್ನು ಮೀಸಲಿಡುವುದಾಗಿ ತಿಳಿಸಿದರು.