ಬೆಂಗಳೂರು: ಬೆಳಗಾವಿ ಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ನಾಡ ಧ್ವಜ ಹಾರಿಸಿದ ಘಟನೆ ಮತ್ತು ನಂತರ ನಡೆದ ಘಟನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಕೈಲಾಗದವರೆಲ್ಲರೂ ಕನ್ನಡಿಗರ ಮೇಲೆ ಸವಾರಿ ಮಾಡಲು ಬಂದಾರು ಎಂದು ಎಚ್ಚರಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ತಪ್ಪಿರಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ಪಾಲಿಕೆ ಎದುರು ಡಿ.28ರಂದು ಕನ್ನಡಪರ ಹೋರಾಟಗಾರರು ನಾಡ ಧ್ವಜ ಹಾರಿಸಿದ ನಂತರದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಮ್ಮ ನೆಲದಲ್ಲಿ ನಮ್ಮ ಧ್ವಜ ಹಾರಿಸಲು ಹರಸಾಹಸಪಡುವುದು, ಅದಕ್ಕೆ ಕಾವಲು ಕಾಯುವುದು, ಧ್ವಜ ತೆರವು ಮಾಡದಂತೆ ಅಧಿಕಾರಿಗಳಲ್ಲಿ ಮನವಿ ಮಾಡುವುದು ಇವೆಲ್ಲವೂ ಕನ್ನಡಿಗರ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆ ಎಂದರು.
ಪಾಲಿಕೆ ಎದುರು ಧ್ಜಜ ಸ್ಥಾಪಿಸಿದ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳಕೂರ ಎಂಬುವವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಡಲು ಯತ್ನಿಸಿರುವ ಘಟನೆಯೂ ನಡೆದು ಹೋಗಿದೆ. ಕರ್ನಾಟಕದಲ್ಲಿ, ಕನ್ನಡ ಧ್ವಜಕ್ಕಾಗಿ ಹೋರಾಡಿದವರ ಮೇಲೆ ಪದೇ ಪದೇ ದಾಳಿ ನಡೆಯುತ್ತದೆ ಎಂದರೆ, ಅವರಿಗೆ ರಕ್ಷಣೆ ನೀಡಲಾಗುತ್ತಿಲ್ಲ ಎಂದರೆ ಆಳುವವರ ಕನ್ನಡಾಭಿಮಾನ, ನಾಡ ಪ್ರೇಮ ಪ್ರಶ್ನಾರ್ಹ ಎಂದು ಟೀಕಿಸಿದರು.
ಇದನ್ನೂ ಓದಿ:ಡಿಕೆಶಿ ಮತ್ತು ಸಿದ್ಧರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ನಳಿನ್ ಕಟೀಲ್
ಕನ್ನಡಿಗರ ಭಾವೈಕ್ಯದ ಸಂಕೇತವಾಗಿರುವ ಕನ್ನಡ ಧ್ವಜ ಡಿ.31ರ ಒಳಗಾಗಿ ತೆರವು ಗೊಳಿಸಬೇಕು ಎಂದು ಹೇಳಿದಾಗಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಈಗ ಕನ್ನಡ ಹೋರಾಟಗಾರರ ಮೇಲೆ ದಾಳಿಯ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಕನ್ನಡಿಗರಿಗೇ ಎಚ್ಚರಿಕೆ ನೀಡುವ ಧೈರ್ಯ ತೋರುವವರಿಗೆ ಶಾಸ್ತಿಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಧ್ವಜ ಸ್ಥಾಪಿಸಿದ ನಂತರದ ಘಟನೆಗಳನ್ನು ಸರ್ಕಾರ ಕೂಡಲೇ ಪರಿಶೀಲಿಸಬೇಕು. ಇದರಲ್ಲಿ ಉದ್ಧಟತನ ತೋರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ಕರ್ನಾಟಕದಲ್ಲಿ ‘ಕನ್ನಡಿಗನೇ ಸಾರ್ವಭೌಮ’ ಎಂಬ ಸಂದೇಶ ರವಾನಿಸಬೇಕು. ಇಲ್ಲವಾದರೆ, ಕೈಲಾಗದವರೆಲ್ಲರೂ ಕನ್ನಡಿಗರ ಮೇಲೆ ಸವಾರಿ ಮಾಡಲು ಬಂದಾರು ಎಂದು ಎಚ್ ಡಿಕೆ ಟ್ವೀಟ್ ಮಾಡಿದ್ದಾರೆ.