ಬೆಂಗಳೂರು: ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲ ಎಂದು ಚಿಂತನಾ ಶಿಬಿರದಲ್ಲಿ ರಾಹುಲ್ ಗಾಂಧಿ ಮಾಡಿರುವ ವ್ಯಾಖ್ಯಾನಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೈದ್ಧಾಂತಿಕ ಬದ್ಧತೆ ಎಂದರೆ ಏನು ಎಂದು ರಾಹುಲ್ ಗಾಂಧಿ ಪ್ರಾದೇಶಿಕ ಪಕ್ಷಗಳಿಗೆ ಸ್ವಲ್ಪ ಬಿಡಿಸಿ ಹೇಳಬೇಕು ಎಂದು ಟ್ವೀಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಸೈದ್ಧಾಂತಿಕ ಬದ್ಧತೆ ಎಂದರೆ ಏನು? ರಾಹುಲ್ ಗಾಂಧಿ ಅವರು ಪ್ರಾದೇಶಿಕ ಪಕ್ಷಗಳಿಗೆ ಸ್ವಲ್ಪ ಬಿಡಿಸಿ ಹೇಳಬೇಕು. ಸೈದ್ಧಾಂತಿಕ ಬದ್ಧತೆ ಎಂದರೆ, ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಹಿನ್ನೆಲೆಯ ನೆಪ ನೀಡಿ, ಡಿಎಂಕೆ-ಎಲ್ಟಿಟಿಇ ಸಂಬಂಧವನ್ನು ಮುನ್ನೆಲೆಗೆ ತಂದು ಆ ಪಕ್ಷವನ್ನು ಸಂಪುಟದಿಂದ ಹೊರಗಿಡಬೇಕು ಎಂದು ಹೇಳಿ ಐ.ಕೆ.ಗುಜ್ರಾಲ್ ನೇತೃತ್ವದ ಸಂಯುಕ್ತ ರಂಗ ಸರಕಾರವನ್ನು ಉರುಳಿಸಿದ ಕಾಂಗ್ರೆಸ್ ಪಕ್ಷವು ಆಮೇಲೆ ಅದೇ ಪಕ್ಷದ ಹೆಗಲ ಮೇಲೆ ಕೈ ಹಾಕಿದ್ದಾ ಎಂದು ಪ್ರಶ್ನಿಸಿದ್ದಾರೆ.
ಯುಪಿಎ 1 & 2 ಸರಕಾರಗಳಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಸಂಪುಟದಲ್ಲಿ ಅದೇ ಡಿಎಂಕೆಯ ಜತೆ 10 ವರ್ಷ ಅಧಿಕಾರದ ಸೋಪಾನ ಹಂಚಿಕೊಂಡಿದ್ದು ಸೈದ್ಧಾಂತಿಕ ಬದ್ಧತೆಯಾ? ಬಿಜೆಪಿ ಸೋಲಿಸುವ ಶಕ್ತಿ ಕಾಂಗ್ರೆಸ್ ಗೆ ಮಾತ್ರ ಇದೆ ಎನ್ನುವ ರಾಹುಲ್ ಗಾಂಧಿ ಅವರು, ತಮ್ಮ ಪಕ್ಷ 10 ವರ್ಷ ಅಧಿಕಾರದ ಸುಖ ಅನುಭವಿಸಿದ್ದು ಪ್ರಾದೇಶಿಕ ಪಕ್ಷಗಳ ಶಕ್ತಿ ಮತ್ತು ದಾಕ್ಷಿಣ್ಯದಿಂದ ಎನ್ನುವುದನ್ನು ಮರೆಯಬಾರದು ಎಂದು ಕುಟುಕಿದ್ದಾರೆ.
Related Articles
ಇದನ್ನೂ ಓದಿ:ಪಠ್ಯದಲ್ಲಿ ಹೆಗಡೆವಾರ್ ಭಾಷಣ ಸೇರ್ಪಡೆಯಾದರೆ ತಪ್ಪೇನು?: ಸಿ.ಟಿ.ರವಿ
ಮೈತ್ರಿ ಸರಕಾರ ಮಾಡೋಣ ಎಂದು ಮನೆ ಬಾಗಿಲಿಗೆ ಬಂದು, ಸರಕಾರವನ್ನೂ ಮಾಡಿ ಹಿಂಬಾಗಿಲಿನಿಂದ ಆಪರೇಷನ್ ಕಮಲವೆಂಬ ಅನೈತಿಕ ರಾಜಕಾರಣಕ್ಕೆ ʼಕೈʼಜೋಡಿಸಿದ್ದು ಸೈದ್ಧಾಂತಿಕ ಬದ್ಧತೆಯಾ? ಮಿತ್ರಪಕ್ಷಗಳನ್ನೇ ನುಂಗಿಹಾಕುವುದೂ ಸೈದ್ಧಾಂತಿಕ ರಾಜಕಾರಣವಾ? ಪ್ರಾದೇಶಿಕ ಪಕ್ಷಗಳ ಭೀತಿ ಎದುರಿಸುತ್ತಿರುವ ಫೋಬಿಯಾದಲ್ಲಿರುವ ಕಾಂಗ್ರೆಸ್; ಆಂಧ್ರ, ತೆಲಂಗಾಣ, ಒಡಿಶಾ ಸೇರಿದಂತೆ ಯಾವ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೊನೆಗಾಲದಲ್ಲಿದೆ. ಇದನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಎಚ್ ಡಿಕೆ ಕುಟುಕಿದ್ದಾರೆ.