ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಳೆದ 15 ತಿಂಗಳಲ್ಲಿ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪಚುನಾವಣೆ ಫಲಿತಾಂಶ ಗೆಲುವು ತಂದು ಕೊಟ್ಟಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಉಪಚುನಾವಣೆ ಸೋಲಿನ ನಂತರ ಟ್ವೀಟ್ ಮಾಡಿರುವ ಅವರು, ರಾಜ್ಯದ ಎರಡು ಉಪ ಚುನಾವಣೆಗಳ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಋಣಿ ಎಂದಿದ್ದಾರೆ.
ಈ ಫಲಿತಾಂಶದ ಹಿನ್ನಡೆಯಿಂದ ಧೃತಿಗೆಡಬೇಕಾದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಉಪಚುನಾವಣೆ ಫಲಿತಾಂಶ ಭವಿಷ್ಯದ ಮಂತ್ರದಂಡ ಅಲ್ಲ. ಉಪಚುನಾವಣೆಗಳು ಹೇಗೆ ನಡೆದವು ಎಂಬ ಪರಾಮರ್ಶೆಗೆ ಹೋಗುವುದಿಲ್ಲ. ಜನತಾ ಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಶಿರಾ’ದಲ್ಲಿ ‘ರಾರಾ’ಜಿಸಿದ ಕಮಲ: ಬಿಎಸ್ ವೈ ಮತ್ತಷ್ಟು ಭದ್ರ, ಕೈ ರಣತಂತ್ರ ಛಿದ್ರ
ಹಿಂದೊಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆಯಲ್ಲಿ ಜನತೆ ಮನ್ನಣೆ ನೀಡಿರಲಿಲ್ಲ. ಕೇವಲ 2 ಸೀಟು ಪಕ್ಷಕ್ಕೆ ಬಂದಿದ್ದ ಕಾಲವೊಂದಿತ್ತು. ಆನಂತರ ಇದೇ ಜನತೆ ಮುಖ್ಯಮಂತ್ರಿ ಮಾಡಿದರು, ಜನಾಶೀರ್ವಾದದಿಂದ ಪ್ರಧಾನಿಯಾದರು. ಉಪಚುನಾವಣೆ ಫಲಿತಾಂಶದಿಂದ ಕುಗ್ಗಿ ಹೋಗದೆ, ಪಕ್ಷವನ್ನು ಸಂಘಟಿಸಿ ಬಲಪಡಿಸುವತ್ತ ಗಮನಹರಿಸುತ್ತೇನೆ ಎಂದು ಎಚ್ ಡಿಕೆ ವಿಶ್ವಾಸ ವ್ಯಕ್ತಪಡಿಸಿದರು