Advertisement

ಕೇಂದ್ರ ಸರ್ಕಾರ ಜನರ ಕೈಬಿಟ್ಟಂತೆ ರಾಜ್ಯ ಸರ್ಕಾರ ಜನರನ್ನು ನಿರ್ಲಕ್ಷಿಸಬಾರದು: ಎಚ್ ಡಿಕೆ

01:38 PM May 17, 2021 | Team Udayavani |

ಬೆಂಗಳೂರು: ಜನರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ನ ಉಸಾಬರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ಕೈತೊಳೆದುಕೊಂಡಿದೆ. ಕೇಂದ್ರ ಸರ್ಕಾರ ಜನರ ಕೈಬಿಟ್ಟಂತೆ ರಾಜ್ಯ ಸರ್ಕಾರ ಜನರನ್ನು ನಿರ್ಲಕ್ಷಿಸಬಾರದು. ಅವರ ಅಗತ್ಯಗಳನ್ನು ಪೂರೈಸುವುದರತ್ತ ರಾಜ್ಯ ಗಮನಹರಿಸಬೇಕು. ಲಾಕ್‌ಡೌನ್‌ನಲ್ಲಿ ಪರಿಹಾರ ಕ್ರಮಗಳು ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರ್ಕಾರ ಲಾಕ್‌ಡೌನ್‌ ವಿಸ್ತರಿಸುವ ಚಿಂತನೆಯಲ್ಲಿದೆ ಎಂದು ವರದಿಯಾಗುತ್ತಿದೆ. ಲಾಕ್‌ಡೌನ್‌ ವಿಸ್ತರಿಸುವುದೇ ಆದರೆ, ಅದು ‘ಜನಹಿತದ ಲಾಕ್‌ಡೌನ್‌’ ಆಗಿರಲಿ. ಆರ್ಥಿಕ, ಆಹಾರ ಪ್ಯಾಕೇಜ್‌, ಪರಿಹಾರ ಕ್ರಮಗಳು ಉದ್ದೇಶಿತ ವಿಸ್ತರಿತ ಲಾಕ್‌ಡೌನ್‌ನಲ್ಲಿರಲಿ. ಸರ್ವಪಕ್ಷಗಳ ಸಭೆಯಲ್ಲಿ ನಾವು ಸೂಚಿಸಿದ್ದೂ ‘ಜನಹಿತದ ಲಾಕ್‌ಡೌನ್‌’ ಕಲ್ಪನೆಯೇ ಆಗಿತ್ತು ಎಂದಿದ್ದಾರೆ.

ನೆರೆಯ ರಾಜ್ಯಗಳಲ್ಲಿ ಲಾಕ್‌ಡೌನ್‌ ಹೇಗಿದೆ, ಜನರಿಗೆ ಹೇಗೆ ನೆರವು ಸಿಗುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಒಂದು ಬಾರಿ ಅವಲೋಕಿಸಬೇಕು. ಜನರನ್ನು ಮನೆಗಳಿಂದ ಹೊರ ಬಾರದಂತೆ ತಡೆಯುವುದಷ್ಟೇ ಈ ಲಾಕ್‌ಡೌನ್‌ನ ಉದ್ದೇಶವಾಗಬಾರದು. ಜನರ ಸಹಭಾಗಿತ್ವದೊಂದಿಗೆ ವೈರಾಣುವನ್ನು ನಿಗ್ರಹಿಸುವುದು ಉದ್ದೇಶವಾಗಬೇಕು. ಅದಕ್ಕಾಗಿ ಜನರಿಗೆ ಪರಿಹಾರ ಅಗತ್ಯ ಎಂದು ಎಚ್ ಡಿಕೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಬ್ಲಾಕ್ ಫಂಗಸ್ ನ್ನು ಅಧಿಕೃತ ರೋಗಗಳ ಪಟ್ಟಿಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಿ: ಸಿದ್ದರಾಮಯ್ಯ

ಲಾಕ್‌ಡೌನ್‌ ಜನರ ಜೀವ ಉಳಿಸುವ ಕ್ರಮ ಹೌದು. ಆದರೆ, ಈ ಲಾಕ್‌ಡೌನ್‌ ಜನರ ಬದುಕನ್ನು ಹೈರಾಣಾಗಿಸುತ್ತಿದೆ ಎಂಬುದೂ ನಮಗೆಲ್ಲರಿಗೂ ಅರಿವಿಗೆ ಬಂದಿರುವ ವಿಚಾರ. ಹೀಗಾಗಿಯೇ ನಾವು ಸೂಚಿಸುತ್ತಿರುವ ಜನಹಿತದ ಲಾಕ್‌ಡೌನ್‌ ಮಾಡುವುದರತ್ತ ಸರ್ಕಾರ ಆದ್ಯತೆ ನೀಡಬೇಕು. ಜನರ ಜೀವ ಉಳಿಸುತ್ತಲೇ, ಜೀವನಕ್ಕೂ ನೆರವಾಗುವುದು ಜನಪರ ಸರ್ಕಾರವೊಂದರ ಕರ್ತವ್ಯ ಎಂದು ಎಚ್ ಡಿಕೆ ಟ್ವೀಟ್ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next